ಚೆನ್ನೈ: ಇಂದು ಭಾರತದ ಪಾಲಿಗೆ ಅತ್ಯಂತ ಕರಾಳ ದಿನ. ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತೀಯ ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್ ನಿಧರಾಗಿದ್ದಾರೆ. ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ಸೇರಿ 13 ಮಂದಿ ಮೃತಪಟ್ಟಿದ್ದಾರೆ.
ವೆಲ್ಲಿಂಗ್ಟನ್‌ನ ಮಿಲಿಟರಿ ಶಾಲೆಯಲ್ಲಿ ನಿಗದಿಯಾಗಿದ್ದ ಸೆಮಿನಾರ್ಗೆಂದು ಬಿಪಿನ್ ರಾವತ್ ಸೇರಿ 14 ಮಂದಿ ಹೆಲಿಕಾಪ್ಟರ್ನಲ್ಲಿ Mi-17V5 ಪ್ರಯಾಣಿಸುತ್ತಿದ್ದರು. ಇನ್ನು ಕೆಲವೇ ಕ್ಷಣದಲ್ಲಿ ಲ್ಯಾಂಡಿಂಗ್ ಆಗಬೇಕು ಅನ್ನುವಷ್ಟರಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು. ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬಿಪಿನ್ ರಾವತ್ ಅವರ ಚೇತರಿಕೆಗಾಗಿ ದೇಶದ ಜನತೆ ಸಲ್ಲಿಸಿದ ಪ್ರಾರ್ಥನೆ ಫಲಿಸಲಿಲ್ಲ. ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ.
1958ರ ಮಾರ್ಚ್ 16ರಂದು ಉತ್ತರಾಖಂಡ್ನ ಪೌರಿಯಲ್ಲಿ ಬಿಪಿನ್ ರಾವತ್ ಜನಿಸಿದ್ದರು. ಇವರದ್ದು ಸೇನಾ ಕುಟುಂಬವೇ ಆಗಿದ್ದರಿಂದ ದೇಶಭಕ್ತಿ ಇವರ ಕಣಕಣದಲ್ಲಿಯೂ ಹರಿಯುತ್ತಿತ್ತು. 1978ರಲ್ಲಿ ಗೂರ್ಖಾ ರೆಜಿಮೆಂಟ್ ಮೂಲಕ ಸೇನೆಗೆ ಸೇರಿಕೊಂಡರು. 2016ರಲ್ಲಿ ಭಾರತೀಯ ಸೇನಾ ಪಡೆ ಮುಖ್ಯಸ್ಥರಾಗಿ ನಿಯುಕ್ತಿಗೊಂಡರು. 1987ರಲ್ಲಿ ಅರುಣಾಚಲ ಪ್ರದೇಶದ ಸುಮದೋರೊಂಗ್‌ಚ್ಯೂ ಪ್ರದೇಶದಲ್ಲಿ ಚೀನಾ ಮತ್ತು ಭಾರತ ಎದುರುಬದುರಾದ ಸಮಯದಲ್ಲಿ ರಾವತ್ ನೇತೃತ್ವದ ಬಟಾಲಿಯನ್ ಪ್ರಮುಖ ಪಾತ್ರ ವಹಿಸಿರುವುದು ಉಲ್ಲೇಖಾರ್ಹ. 2015ರಲ್ಲಿ ಮಯನ್ಮಾರ್ನಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲೂ ಇವರ ಪಾತ್ರ ಶ್ಲಾಘನೀಯ. ಕಾಂಗೋದಲ್ಲಿ ವಿಶ್ವಸಂಸ್ಥೆಯ ಪರವಾಗಿ ಹೋದ ಭಾರತೀಯ ಸೇನಾ ಪಡೆಯ ನೇತೃತ್ವವನ್ನು ರಾವತ್ ಅವರೇ ವಹಿಸಿದ್ದರು. 2019ರಲ್ಲಿ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಭೂ ಸೇನೆ, ನೌಕಾ ಸೇನೆ ಮತ್ತು ವಾಯು ಸೇನೆ ಸೇರಿ ಮೂರು ಸೇನಾಪಡೆಗೂ ಇವರೇ ದಂಡನಾಯಕರಾಗಿದ್ದರು.
ಇಂದು(ಡಿ.8) ಮಿಲಿಟಲಿ ಶಾಲೆಯಲ್ಲಿ ಸಮಿನಾರ್ಗೆಂದು ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯ್ತೇಜ್, ಹವಲ್ದಾರ್ ಸತ್ಪಾಲ್ ಸೇರಿದಂತೆ 14 ಮಂದಿ ಬುಧವಾರ ಸೇನಾ ಹೆಲಿಕಾಪ್ಟರ್ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಹೆಲಿಕಾಪ್ಟರ್ ಪತನಗೊಂಡು ಬಿಪಿನ್ ರಾವತ್ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ. ಸಿಡಿಎಸ್ ಬಿಪಿನ್ ರಾವತ್ ನಿಧನಕ್ಕೇ ಇಡೀ ದೇಶವೇ ಕಂಬನಿ ಮಿಡಿದಿದೆ.
Discover more from Coastal Times Kannada
Subscribe to get the latest posts sent to your email.
Discussion about this post