ಮಂಗಳೂರು: ಚುನಾಯಿತ ಪ್ರತಿನಿಧಿಗಳ ಧ್ವನಿ ಆಗ ಬೇಕೆಂಬುದು ನನ್ನ ಮಹದಾಸೆ. ಇದುವೇ ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರ ಮುಖ್ಯ ಉದ್ದೇಶ. ಚುನಾಯಿತ ಪ್ರತಿನಿಧಿಗಳನ್ನು ಭೇಟಿ ಮಾಡಿದಾಗ ಅವರು ತಮ್ಮ ಹಲವಾರು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಮುಖ್ಯವಾಗಿ ಅನುದಾನ ಹೆಚ್ಚಳ, ಅಧಿಕಾರ ಮೊಟಕುಗೊಳಿಸ ಬಾರದು ಇತ್ಯಾದಿ. ಇಂತಹ ವಿಷಯಗಳ ಬಗ್ಗೆ ಚರ್ಚಿಸುವ ಮೂಲಕ ಅವರ ಧ್ವನಿಯಾಗುತ್ತೇನೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರು ಹೇಳಿದ್ದಾರೆ.
ಪಂಚಾಯತ್ ರಾಜ್ ನನ್ನ ನೆಚ್ಚಿನ ವಿಷಯ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಪಂಚಾಯತ್‌ರಾಜ್ ಕಾನೂನಿಗೆ ಸಾಂವಿಧಾನಿಕ ತಿದ್ದುಪಡಿ ತರುವುದಾಗಿ ಹೇಳಿದಾಗ ನಾನು ದಿಲ್ಲಿಯಲ್ಲಿದ್ದೆ. ಆಸ್ಕರ್ ಫೆರ್ನಾಂಡಿಸ್ ಜತೆ ಹಲವಾರು ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದೆನು. ಪಂಚಾಯತ್ ರಾಜ್ ವಿಷಯದಲ್ಲಿ ವೈಯಕ್ತಿಕವಾಗಿ ಅಭಿರುಚಿ ಹುಟ್ಟಿಕೊಂಡು ಅಕಾಡೆಮಿಕ್ ಆಗಿ ಆಧ್ಯಯನ ಆರಂಭಿಸಿದೆ. ಹಾಗೆ ಈ ವಿಷಯದಲ್ಲಿ ಎಂಫಿಲ್ ಮತ್ತು ಪಿಎಚ್‌ಡಿಯನ್ನೂ ಮಾಡಿದ್ದೇನೆ. ಈ ಸಂದರ್ಭದಲ್ಲಿ ಮಾಹಿತಿ ಸಂಗ್ರಹಿಸಲು ರಾಜ್ಯದ 7-8 ಜಿಲ್ಲೆಗಳಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಅದರಲ್ಲೂ ಮುಖ್ಯವಾಗಿ ಮಹಿಳೆಯರನ್ನು ಭೇಟಿ ಮಾಡಿದಾಗ ಅವರು ಸ್ವ ಇಚ್ಛೆಯಿಂದ ತೆಗೆದುಕೊಳ್ಳುವ ನಿರ್ಧಾರ ಬೇರೆ ಹಾಗೂ ಒತ್ತಡಗಳಿಗೆ ಮಣಿದು ತೆಗೆದುಕೊಳ್ಳುವ ನಿರ್ಧಾರಗಳು ಬೇರೆ ಎನ್ನುವುದು ತಿಳಿದು ಬಂತು.
ಪಕ್ಷ ಅವಕಾಶ ಕೊಟ್ಟರೆ, ನನ್ನ ಅಂಕಿ ಅಂಶಗಳು ನನಗೆ ನೆರವಿಗೆ ಬರುತ್ತಿದ್ದವು. ಇಲ್ಲದಿದ್ದರೆ ಪಕ್ಷದ ಜಿಲ್ಲಾಧ್ಯಕ್ಷರಿಗೆ ನನ್ನ ಅಧ್ಯಯನದ ಪ್ರತಿಯನ್ನು ಕೊಟ್ಟು ಬಿಡುವುದು ಎನ್ನುವುದನ್ನು ಮೊದಲೇ ನಿರ್ಧರಿಸಿದ್ದೆ. ಎರಡು ಜಿಲ್ಲೆಯಲ್ಲಿ ಒಟ್ಟು 6040 ಮತಗಳಿದ್ದು ಕಾಂಗ್ರೆಸ್ ಪರವಾಗಿ 1900 ರಷ್ಟು ಮತದಾರರಿದ್ದಾರೆ ಎಂಬುದನ್ನು ಆರು ತಿಂಗಳ ಮೊದಲೇ ಲೆಕ್ಕ ಹಾಕಿದ್ದೆ. ಕಾಂಗ್ರೆಸ್ ಪಕ್ಷದ 1500 ಮಂದಿಯನ್ನು ನೇರವಾಗಿ ಭೇಟಿಯಾಗಿದ್ದೇನೆ. ಮೊದಲ ಪ್ರಾಶಸ್ತ್ಯದಲ್ಲಿ ಗೆಲ್ಲುವುದಕ್ಕೆ ಎರಡು ಸಾವಿರ ಮತಗಳು ಬೇಕಾಗುತ್ತವೆ. ನಮ್ಮಲ್ಲಿ ಸ್ವಲ್ಪ ಮತಗಳ ಕೊರತೆ ಇದ್ದರೂ, ನನ್ನ ಅಭಿಮಾನಿಗಳು, ಪಕ್ಷೇತರರು, ಗ್ರಾಮ ಪಂಚಾಯತ್ ಪ್ರತಿನಿಧಿಗಳು ಕೈಬಿಡುವುದಿಲ್ಲ ಎಂಬ ವಿಶ್ವಾಸ ಇದೆ ಎಂದು ಮಂಜುನಾಥ ಭಂಡಾರಿ ಹೇಳಿದರು.
ಪಂಚಾಯತ್ ಪ್ರತಿನಿಧಿಗಳ ಪರ ಧ್ವನಿಯಾಗಿ ನಿಲ್ಲಲಿದ್ದೇನೆ. ನಿಮ್ಮ ಕನಸನ್ನು ಈಡೇರಿಸುತ್ತೇನೆಂಬ ಪ್ರಾಮಾಣಿಕ ಭರವಸೆಯನ್ನು ಕೊಡಲಿದ್ದೇನೆ ಎಂದು ಮಂಜುನಾಥ ಭಂಡಾರಿ ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post