ಬೆಂಗಳೂರು: ಹೆತ್ತ ಮಗುವನ್ನೇ ಕೊಂದು ಶವ ಸಾಗಿಸುವಾಗ ತಾಯಿ ಸಿಕ್ಕಿಬಿದ್ದಿದ್ದಾಳೆ. ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸರು ಮಹಿಳೆಯನ್ನ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ, ಕಾರಿನಲ್ಲಿ 4 ವರ್ಷದ ಮಗುವಿನ ಶವ ಪತ್ತೆಯಾಗಿದೆ. ಪಶ್ಚಿಮ ಬಂಗಾಳ ಮೂಲದ 39 ವರ್ಷದ ಸುಚನಾ ಸೇಠ್ ಎಂಬಾಕೆ, ತನ್ನ ಮಗನನ್ನ ಗೋವಾದಲ್ಲಿ ಕೊಂದು, ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು, ಕಾರಿನಲ್ಲಿ ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದಳು. ಇನ್ನೇನು ಮೂರ್ನಾಲ್ಕು ತಾಸಿನಲ್ಲಿ ಸುಚನಾ, ಮಗನ ಶವದೊಂದಿಗೆ ಬೆಂಗಳೂರು ತಲುಪಿಬಿಟ್ಟಿರೋಳು. ಅಷ್ಟರಲ್ಲಿ ಐಮಂಗಲ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಪತಿಯೊಂದಿಗೆ ದೂರವಾಗಲು ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದ ಸುಚನಾ, ಜನವರಿ 6ರಂದು ನಾಲ್ಕು ವರ್ಷದ ಮಗನ ಜೊತೆ ಗೋವಾಗೆ ತೆರಳಿದ್ದಳು. ಗೋವಾದ ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಸುಚನಾ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಂತರ ಕೈ ಕುಯ್ದುಕೊಂಡು ಆತ್ಮಹತ್ಯೆಗೂ ಸುಚನಾ ಪ್ರಯತ್ನಿಸಿದ್ದಳು. ಇನ್ನು ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸುಚನಾ ಮಾನಸಿಕ ಒತ್ತಡದಲ್ಲಿದ್ದರು. ಈ ನಡುವೆ ನ್ಯಾಯಾಲಯ ಪ್ರತಿ ಭಾನುವಾರ ಮಗುವನ್ನ ನೋಡಲು ತಂದೆಗೆ ಅನುಮತಿ ನೀಡಿತ್ತು. ಹೀಗಾಗಿ ಫಿಲಿಪೈನ್ಸ್ನಲ್ಲಿರುವ ವೆಂಕಟರಮಣ ಪ್ರತಿ ಭಾನುವಾರ ವಿಡಿಯೋ ಕಾಲ್ ಮುಖಾಂತರ ಮಗುವನ್ನು ನೋಡುತ್ತಿದ್ದನು. ಆದರೆ ಸುಚನಾಗೆ ಇದು ಇಷ್ಟವಿರಲಿಲ್ಲ.
ಸುಚನಾ ಮಗನನ್ನು ಕರೆದುಕೊಂಡು ಜನವರಿ 6 ರಂದು ಗೋವಾಕ್ಕೆ ಪ್ರವಾಸ ತೆರಳಿದ್ದಾರೆ. ಜನವರಿ 7 ರವಿವಾರ ರಾತ್ರಿ ಉತ್ತರ ಗೋವಾ ತಲುಪಿದ್ದಾರೆ. ಅಲ್ಲಿ ಕೊಲ್ ಬನಿಯಾನ್ ಹೋಟೆಲ್ನಲ್ಲಿ ತಾಯಿ-ಮಗು ಉಳಿದುಕೊಂಡಿದ್ದಾರೆ. ಸುಚನಾ ಜನವರಿ 7ರ ಮಧ್ಯರಾತ್ರಿ ರಾತ್ರಿಯೇ ಹೋಟೆಲ್ನಿಂದ ಚೆಕ್ಔಟ್ ಆಗಿದ್ದಾರೆ. ಬಳಿಕ ಹೊಟೆಲ್ ಸಿಬ್ಬಂದಿಗೆ “ಬೆಂಗಳೂರಿಗೆ ಹೋಗಲು ಕ್ಯಾಬ್ ಮಾಡಿಕೊಡುವಂತೆ” ಕೇಳಿದ್ದಾರೆ. ಆಗ ಹೊಟೇಲ್ ಸಿಬ್ಬಂದಿ ಗೋವಾದಿಂದ ಬೆಂಗಳೂರು ಹೋಗಲು ಕ್ಯಾಬ್ ದುಬಾರಿ ಆಗುತ್ತೆ ಅಂತ ಹೇಳಿದ್ದಾರೆ. ವಿಮಾನದ ಮೂಲಕ ಹೋದರೇ ಕಡಿಮೆ ದರದಲ್ಲಿ ತಲುಪಬಹುದು ಎಂದು ಹೊಟೆಲ್ ಸಿಬ್ಬಂದಿ ತಿಳಿಸಿದ್ದಾರೆ.
ಆದರೆ ಇದಕ್ಕೆ ಒಪ್ಪದ ಸುಚನಾ “ಬೇಡ ಬೇಡ ನನಗೆ ಟ್ಯಾಕ್ಸಿನೇ ಬೇಕು” ಅಂತ ಪಟ್ಟು ಹಿಡಿದಿದ್ದಾರೆ. ರಾತ್ರಿಯೇ ಗೋವಾದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇದಾದ ಬಳಿಕ ಇಂದು (ಜ.09) ಬೆಳಗ್ಗೆ ಹೋಟೆಲ್ ಸಿಬ್ಬಂದಿ ರೂಮ್ ಕ್ಲೀನ್ ಮಾಡಲು ಹೋಗಿದ್ದಾರೆ. ಈ ವೇಳೆ ರೂಮ್ ನಲ್ಲಿ ರಕ್ತದ ಕಲೆಗಳು ಬಿದ್ದಿದ್ದನ್ನು ಗಮನಿಸಿದ್ದಾರೆ. ಕೂಡಲೇ ಹೋಟೆಲ್ ಕಲ್ಲಂಗುಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮಹಿಳೆಗೆ ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ನಂತರ ಪೊಲೀಸರು ಅದು ಹೇಗೋ ಟ್ಯಾಕ್ಸಿ ಚಾಲಕನ ಮೊಬೈಲ್ ನಂಬರ್ ಪಡೆದು ಆತನೊಂದಿಗೆ ಮಾತಾಡಿ, ಬಳಿಕ ಸುಚನಾ ಜತೆಗೂ ಮಾತಾಡಿದ್ದಾರೆ. ಈ ವೇಳೆ ನಿಮ್ಮ ಮಗ ಎಲ್ಲಿದೆ ಅಂತಾ ಪೊಲೀಸರು ಕೇಳಿದ್ದಾರೆ. ಆಗ ಸುಚನಾ ತನ್ನ ಸ್ನೇಹಿತನ ಮನೆಯಲ್ಲಿ ಬಿಟ್ಟು ಬಂದಿದ್ದಾಗಿ ಹೇಳಿದ್ದಾರೆ.
ಸುಚನಾ ನೀಡಿದ ವಿಳಾಸ ಪರಿಶೀಲನೆ ನಡೆಸಿದಾಗ ವಿಳಾಸ ತಪ್ಪಾಗಿದೆ. ಮಹಿಳೆ ನೀಡಿದ ವಿಳಾಸ ತಪ್ಪಾಗಿದೆ ಎಂದು ಗೊತ್ತಾಗುತ್ತಿದ್ದಂತೆ ಪೊಲೀಸರು ಮತ್ತೆ ಟ್ಯಾಕ್ಸಿ ಚಾಲಕನ ಜೊತೆಗೆ ಮಾತಾಡಿದ್ದಾರೆ. ಮಹಿಳೆಗೆ ಗೊತ್ತಾಗದಂತೆ ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ. ಆಗ ಟ್ಯಾಕ್ಸಿ ಚಾಲಕ ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಬಳಿಕ ಗೋವಾ ಪೊಲೀಸರು ಐಮಂಗಲ ಪೊಲೀಸರನ್ನು ಸಂಪರ್ಕಿಸಿ “ನಾವು ಚಿತ್ರದುರ್ಗ ಎಸ್‌ಪಿ ಅವರ ಜೊತೆಗೆ ನಾನು ಮಾತಾಡಿದ್ದೇವೆ, ಕಾರು ತಪಾಸಣೆ ಮಾಡಿ” ಎಂದು ಹೇಳಿದ್ದಾರೆ. ಈ ವೇಳೆ ಬ್ಯಾಗ್ನಲ್ಲಿ ಮಗುವಿನ ಶವ ಸಿಕ್ಕಿದೆ. ಕೂಡಲೇ ಐಮಂಗಲ ಪೊಲೀಸರು ಸುಚನಾ ಅವರನ್ನು ವಶಕ್ಕೆ ಪಡೆದಿದ್ದಾರೆ. ಬ್ಯಾಗ್ನಲ್ಲಿ ಶವ ಇದೆ ಎಂಬುವ ಮಾಹಿತಿ ತಿಳಿಯುತ್ತಿದ್ದಂತೆ ಅತ್ತ ಹೊಟೆಲ್ ಮ್ಯಾನೇಜರ್ ಕಡೆಯಿಂದ ಕಲ್ಲಂಗುಡ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ಸಂಬಂಧ ನಾರ್ಥ್ ಗೋವಾ ಎಸ್‌ಪಿ ನಿಧೀನ್ ವಾಲ್ಸಾನ್ ಮಾತನಾಡಿ, ಎಸ್ಐ ಪರೇಶ್ ನೇತೃತ್ವದ ತಂಡ ಕೂಡಲೇ ಐಮಂಗಲಕ್ಕೆ ತೆರಳಿ ಮಹಿಳೆಯನ್ನು ವಶಕ್ಕೆ ಪಡೆದಿದೆ. ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದೇವೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಕೊಲೆ ಯಾವಾಗ ಮತ್ತು ಹೇಗೆ ಆಗಿದೆ ಅನ್ನೋ ಮಾಹಿತಿ ಗೊತ್ತಾಗಲಿದೆ. ಸದ್ಯ ಮಗುವಿನ ಮೃತದೇಹವನ್ನು ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಸುಚನಾಳ ಪತಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಗೋವಾ ಪೊಲೀಸರು ಸುಚನಾಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮಗುವಿನ ಮೃತದೇಹವನ್ನು ಕುಟುಂಬಸ್ಥರಿಗೆ ವರ್ಗಾಯಿಸಲಾಗುತ್ತದೆ,
Discussion about this post