ಕೊಣಾಜೆ: ಜರ್ಮನಿಯ ಡ್ರಸ್ಡೆನ್‌ನ ‘ಇನ್‌ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಕೆಮಿಸ್ಟ್ರಿ’ಯ ನಿರ್ದೇಶಕರಾಗಿ ಮಂಗಳೂರು ಮೂಲದ ಪ್ರೊ. ಅಂಜನಾದೇವಿ ನೇಮಕಗೊಂಡಿದ್ದಾರೆ. ಹಿರಿಯ ಡಾಕ್ಟೋರಲ್ ವಿದ್ಯಾರ್ಥಿಗಳಲ್ಲಿ ಜರ್ಮನಿಯಲ್ಲಿ ಇಂಥ ಉನ್ನತ ಹುದ್ದೆಯನ್ನು ಅಲಂಕರಿಸಿರುವವರಲ್ಲಿ ಪ್ರೊ.ಅಂಜನಾದೇವಿ ಅವರು ಮೊದಲನೆಯವರಾಗಿದ್ದಾರೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಶ್ಲಾಘಿಸಿದೆ.
ಪ್ರೊ.ಅಂಜನಾದೇವಿ ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಸ್ತು ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಥಮ ರ್‍ಯಾಂಕ್ ನೊಂದಿಗೆ ತೇರ್ಗಡೆ ಯಾಗಿದ್ದರು. ‘ಗೇಟ್’ ಪರೀಕ್ಷೆಯಲ್ಲೂ ಉತ್ತೀರ್ಣರಾ ಗಿದ್ದರು. ಬೋಷೆಮ್‌ರೂರ್ ವಿಶ್ವವಿದ್ಯಾಲಯದಲ್ಲಿ ಅಲೆಕ್ಸಾಂಡರ್ ವಾನ್ ಹ್ಯೂಮ್ಬೋಲ್ಟ್ ಸ್ಕಾಲರ್‌ಶಿಪ್‌ನೊಂದಿಗೆ ಉನ್ನತ ಡಾಕ್ಟೋರಲ್ ಸಂಶೋಧನೆ ನಡೆಸಿ 2002ರಿಂದ ಅಲ್ಲಿಯೇ ಪ್ರಾಧ್ಯಾಪಕರಾಗಿದ್ದಾರೆ.
ಜರ್ಮನಿಯ ಪ್ರತಿಷ್ಠಿತ ಐಎಫ್ ಡಬ್ಲ್ಯೂ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾಗಿರುವ ಪ್ರೊ. ದೇವಿಯವರನ್ನು ಮಂಗಳೂರು ವಿಶ್ವವಿದ್ಯಾನಿಲಯದ ವಸ್ತುವಿಜ್ಞಾನ ವಿಭಾಗವು ಅಭಿನಂದಿಸಿ ವಿಭಾಗದ ವಿಭಾಗದ ಹಿರಿಯ ವಿದ್ಯಾರ್ಥಿಯ ಸಾಧನೆಯು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಹಾಗೂ ವಸ್ತುವಿಜ್ಞಾನ ಸ್ನಾತಕೋತ್ತರ ಪದವಿ ವಿಷಯದ ಪ್ರಾಮುಖ್ಯತೆಯನ್ನು ದೇಶ ವಿದೇಶ ಮಟ್ಟದಲ್ಲಿ ಸಾಕ್ಷೀಕರಿಸಿದೆ ಎಂದು ಅಭಿಪ್ರಾಯ ಪಟ್ಟಿದೆ. ಪ್ರೊ. ದೇವಿಯವರು ಮಂಗಳೂರಿನ ದಿ. ಕೆ. ಪಿ. ಭಾಸ್ಕರ ಮತ್ತು ಎಂ. ವಜ್ರಾಕ್ಷಿ ಇವರ ಪುತ್ರಿಯಾಗಿದ್ದಾರೆ.
Discussion about this post