ಬೆಂಗಳೂರು : ನಕ್ಸಲ್ ನಾಯಕ ವಿಕ್ರಂಗೌಡ ಎನ್ಕೌಂಟರ್ ಬಳಿಕ ಸಂವಿಧಾನದ ವಿರುದ್ಧ ಹಾದಿಯಲ್ಲಿ ತೆರೆಮರೆಯಲ್ಲಿ ಹೋರಾಟ ನಡೆಸುತ್ತಿದ್ದವರು ಮುಖ್ಯವಾಹಿನಿಗೆ ಬಂದರೆ ಸರ್ಕಾರ ಸಹಾನುಭೂತಿಯಿಂದ ನಡೆದುಕೊಳ್ಳಲಿದೆ ಎಂಬ ರಾಜ್ಯ ಸರ್ಕಾರದ ಭರವಸೆಯನ್ನ ನಂಬಿ ಆರು ಮಂದಿ ನಕ್ಸಲೀಯರು ಇಂದು ಸಮಾಜದ ಮುಖ್ಯವಾಹಿನಿಗೆ ಪ್ರವೇಶಿಸಿದರು.
ಸರ್ಕಾರದ ಭರವಸೆ ಜೊತೆಗೆ ಶಾಂತಿಗಾಗಿ ನಾವು ಸಂಘಟನೆ ಹಾಗೂ ಶರಣಾಗತಿ ನೀತಿ ಸಮಿತಿ ಸದಸ್ಯರು ಮನವೊಲಿಸಿ ನಕ್ಸಲೀಯರಾದ ಮುಂಡಗಾರು ಲತಾ, ಸುಂದರಿ, ವನಜಾಕ್ಷಿ, ಕೆ. ವಸಂತ, ಜಿಶಾ ಹಾಗೂ ಮಾರೆಪ್ಪ ಅರೋಲಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಶರಣಾದರು. ಈ ವೇಳೆ ಹೂಗುಚ್ಛ ಹಾಗೂ ಸಂವಿಧಾನ ಪುಸ್ತಕ ನೀಡಿ ಸ್ವಾಗತಿಸಲಾಯಿತು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಅನ್ಯಾಯದ ವಿರುದ್ಧ, ಶೋಷಣೆ, ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಹೋರಾಡುವುದು ತಪ್ಪಲ್ಲ. ವ್ಯವಸ್ಥೆ ಬದಲಾವಣೆಗೆ ಹೋರಾಟ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ಆದರೆ ಹೋರಾಟ ಶಾಂತಿಯುತವಾಗಿ, ನ್ಯಾಯಯುತವಾಗಿ ಮಾಡಬೇಕು. ನಕ್ಸಲಿಸಂ, ಶಸ್ತ್ರಾಸ್ತ್ರ ಹೋರಾಟಕ್ಕೆ ಸಂವಿಧಾನದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಈ ಹಿಂದೆಯೂ ಹಲವು ನಕ್ಸಲೀಯರು ಶಸ್ತ್ರಾಸ್ತ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ಇವರ ಪುನರ್ವಸತಿಗೆ ಸರ್ಕಾರ ನೆರವು ಒದಗಿಸಿದೆ’ ಎಂದರು.
‘ಶಾಂತಿಗಾಗಿ ನಾಗರಿಕ ವೇದಿಕೆಯು ನನ್ನನ್ನು ಭೇಟಿ ಮಾಡಿ ನಕ್ಸಲಿಯರ ಮನವೊಲಿಸುವ ಬಗ್ಗೆ ತಿಳಿಸಿದ್ದರು. ಆ ಸಂದರ್ಭದಲ್ಲಿ ನಕ್ಸಲಿಸಂ ತ್ಯಜಿಸಿ ಮುಖ್ಯವಾಹಿನಿಗೆ ಬರಲು ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದು ಹೇಳಿದ್ದೆ. ಕರ್ನಾಟಕದಲ್ಲಿ ನಕ್ಸಲಿಸಂ ಕೊನೆಗಾಣಿಸಲು ಅವರ ಬೇಡಿಕೆಗೆ ಸ್ಪಂದಿಸಲು ಏನೆಲ್ಲಾ ಕಾರ್ಯಕ್ರಮ ಅಗತ್ಯವೊ ಅದನ್ನು ಕಾನೂನು ಚೌಕಟ್ಟಿನಲ್ಲಿ ಮಾಡುತ್ತೇವೆ’ ಎಂದು ಸಿಎಂ ಅಭಯ ನೀಡಿದರು.
ಶಸ್ತ್ರಾಸ್ತ್ರ ಮೂಲಕ ಹೋರಾಟ ಮಾಡಿ ನ್ಯಾಯ ಪಡೆಯಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲ. ಶಾಂತಿಯುತವಾಗಿ ಹೋರಾಟ ನಡೆಸಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಸರ್ಕಾರ ಇದನ್ನು ವಿರೋಧಿಸುವುದಿಲ್ಲ. ಆದರೆ ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಸುಮ್ಮನಿರಲ್ಲ. ನಕ್ಸಲಿಸಂ ಮುಕ್ತವಾದ ಸಮಾಜ ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗೆ ಬರುವ ನಕ್ಸಲಿಯರಿಗೆ ಎಲ್ಲಾ ರೀತಿಯ ನೆರವು ಬಹಿರಂಗವಾಗಿ ಹೇಳಿದ್ದೆ. ನಿಮ್ಮನ್ನು ಕ್ರಿಮಿನಲ್‌ಗಳ ರೀತಿ ನೋಡದೆ, ಮಾನವರಂತೆ ನೋಡುವ ಭರವಸೆ ನೀಡಿದಂತೆ ಸರ್ಕಾರ ನಡೆದುಕೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಸರ್ಕಾರದಿಂದ ಸಿಗುವ ಪ್ಯಾಕೇಜ್ ಏನು?
ಎ ಕೆಟಗರಿ: ನಕ್ಸಲರು ರಾಜ್ಯದವರೇ ಆಗಿ, ಆಕ್ಟೀವ್ ಆಗಿದ್ದು ಕೇಸ್ ಇದ್ದರೆ ಅಂತಹವರಿಗೆ ಎ ಕೆಟಗರಿ ಅಡಿಯಲ್ಲಿ 7.50 ಲಕ್ಷ ರೂಪಾಯಿ ಹಣವನ್ನು ಸರ್ಕಾರ ನೀಡುತ್ತದೆ.
ಬಿ ಕೆಟಗರಿ: ನಕ್ಸಲರು ಹೊರ ರಾಜ್ಯದವರಾಗಿದ್ದು, ಶಸ್ತ್ರಸಜ್ಜಿತ ನಕ್ಸಲ್ ಗುಂಪಿನ ಸದಸ್ಯನಾಗಿದ್ದರೆ ಆತನ ಮೇಲೆ ಒಂದಕ್ಕಿಂತ ಹೆಚ್ಚು ಪ್ರಕರಣಗಳಿದ್ದರೆ ಅಂಥವರಿಗೆ 4 ಲಕ್ಷ ರೂ. ಪ್ಯಾಕೇಜ್ ನೀಡಲಾಗುತ್ತದೆ.
ಸಿ ಕೆಟಗರಿ: ಎಡಪಂಥೀಯ ಭಯೋತ್ಪಾದನಾ ಚಟುವಟಿಕೆ ಬೆಂಬಲಿಸುವ ನಕ್ಸಲರ ಸಂಪರ್ಕ ಹೊಂದಿರುವ ಹಾಗೂ ಪ್ರಕರಣಗಳು ಹೊಂದಿದ್ದರೆ ಅಂತಹವರಿಗೆ 2 ಲಕ್ಷ ರೂಪಾಯಿ ಹಣವನ್ನು ಸರ್ಕಾರ ನೀಡುತ್ತದೆ. ಒಮ್ಮೆಲೆ ಈ ಪ್ಯಾಕೇಜ್ ಹಣ ಪಡೆಯುವಂತಿಲ್ಲ. ಒಟ್ಟು ಮೂರು ಭಾಗಗಳಾಗಿ ಹಣ ಪಡೆಯುತ್ತಾರೆ.
ಇಷ್ಟೇ ಅಲ್ಲದೆ ಶರಣಾಗುವ ನಕ್ಸಲರು ಆಯುಧಗಳನ್ನು ಹಾಜರುಪಡಿಸಿದರೆ ಕೆಟಗರಿ ಹಾಗೂ ಆಯುಧಗಳ ಮೇಲೆ ಹಣ ನೀಡಲಾಗುತ್ತದೆ. ಅಲ್ಲದೇ ಶರಣಾದ ನಕ್ಸಲರ ವ್ಯಾಪಾರ, ವೃತ್ತಿಗೆ ಸರ್ಕಾರ ಸಹಕಾರ ನೀಡುತ್ತದೆ. ನಕ್ಸಲರು ತರಬೇತಿ ಸಂಸ್ಥೆಗೆ ಸೇರಿದ ಬಳಿಕ ವರ್ಷದ ವರೆಗೆ 5,000 ರೂಪಾಯಿ ಹಣ ನೀಡುತ್ತದೆ. ಇಷ್ಟು ಮಾತ್ರವಲ್ಲದೇ ಶರಣಾಗುವ ನಕ್ಸಲರಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
Discover more from Coastal Times Kannada
Subscribe to get the latest posts sent to your email.
Discussion about this post