ಬೆಂಗಳೂರು, ಫೆ 08: ಸ್ಯಾಂಡಲ್ವುಡ್ ಡ್ರಗ್ ಕೇಸ್ ದೇಶಾದ್ಯಂತ ಸಾಕಷ್ಟು ಚರ್ಚೆ ಮಾಡಿತ್ತು. ಪರಕರಣದಲ್ಲಿ ಆರೋಪಿ ರಾಹುಲ್ ತೋನ್ಸೆ ಹೆಸರು ಸಹ ಕೇಳಿಬಂದಿತ್ತು. ಸದ್ಯ ಇದೇ ಆರೋಪಿ ಇದೀಗ ಬೆಂಗಳೂರಿನ ಉದ್ಯಮಿ ಓರ್ವರಿಗೆ ಕೊಟ್ಯಂತರ ರೂ. ವಂಚನೆ ಮಾಡಿರುವಂತಹ ಘಟನೆ ನಡೆದಿದ್ದು, ಐವರ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಂಚನೆಗೀಡಾದ ಕರಾವಳಿ ಮೂಲದ ಉದ್ಯಮಿ ವಿವೇಕ್ ಪಿ. ಹೆಗ್ಗಡೆ ಎಂಬುವರು ನೀಡಿದ ದೂರಿನ ಮೇರೆಗೆ ಉಡುಪಿ ಮೂಲದ ರಾಮಕೃಷ್ಣ ರಾವ್, ಪತ್ನಿ ರಾಜೇಶ್ವರಿ ರಾವ್, ಮಗ ರಾಹುಲ್ ತೋನ್ಸೆ, ಪುತ್ರಿ ರಕ್ಷಾ ತೋನ್ಸೆ ಹಾಗೂ ಅಳಿಯ ಚೇತನ್ ನಾರಾಯಣ್ ವಿರುದ್ಧ ವಂಚನೆ ಹಾಗೂ ಅನಿಯಂತ್ರಿತ ಠೇವಣಿ ನಿಷೇಧ ಕಾಯ್ದೆಯಡಿ (ಬಡ್ಸ್) ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ರಾಮಕೃಷ್ಣ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇತರೇ ಆರೋಪಿಗಳು ವಿದೇಶದಲ್ಲಿ ತಲೆಮರೆಸಿದ್ದಾರೆ. ಈ ಪೈಕಿ ರಾಹುಲ್ ತೋನ್ಸೆ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ.
25.5 ಕೋಟಿ ರೂ. ವಂಚನೆ: ಕ್ಯಾಸಿನೋದಲ್ಲಿ ಹೂಡಿಕೆ ಮಾಡಿಸಿ ಲಾಭದ ಆಸೆ ತೋರಿಸಿ ಉದ್ಯಮಿ ವಿವೇಕ್ ಹೆಗ್ಡೆ ಎನ್ನುವವರಿಗೆ 25.5 ಕೋಟಿ ರೂ. ವಂಚನೆ ಮಾಡಲಾಗಿದೆ. ಆರೋಪಿ ರಾಹುಲ್ ತೋನ್ಸೆ, ಆತನ ಅಪ್ಪ ರಾಮಕೃಷ್ಣ ರಾವ್, ತಾಯಿ ರಾಜೇಶ್ವರಿ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಎ1 ರಾಮಕೃಷ್ಣ ರಾವ್ ಬಂಧಿಸಿದ್ದಾರೆ.
2023ರ ಫೆ.7ರಂದು ವಿವೇಕ್ಗೆ ಸ್ನೇಹಿತರ ಮೂಲಕ ರಾಮಕೃಷ್ಣ ಪರಿಚಯವಾಗಿದೆ. ಉದ್ಯಮಿ ಕಚೇರಿಯಲ್ಲಿ ಸಾಲ ನೀಡುವ ಬಗ್ಗೆ ಸಭೆ ಆಗಿತ್ತು. ಶ್ರೀಲಂಕಾ, ದುಬೈನಲ್ಲಿ ಕೆಲ ವ್ಯಾಪಾರಗಳಲ್ಲಿ ಲಾಭವಿದೆ ಅಂದು ನಂಬಿಸಿದ್ದರು. ಮಗಳು ರಕ್ಷಾ, ಅಳಿಯ ಚೇತನ್, ಮಗ ರಾಹುಲ್ ಎಲ್ಲಾ ವ್ಯಾಪಾರ ಮಾಡುತ್ತಾರೆ. ಮೊಬೈಲ್ ಮೂಲಕ ಮಗಳು, ಅಳಿಯ ಜೊತೆ ಮಾತನಾಡಿಸಿದ್ದ ರಾಮಕೃಷ್ಣ, ಸಾಲದ ರೂಪದಲ್ಲಿ ನೀಡುವ ಹಣಕ್ಕೆ 4% ಬಡ್ಡಿ ನೀಡುವುದಾಗಿ ತಿಳಿಸಿದ್ದರು.
ಅಳಿಯ, ಮಗಳು ಶ್ರೀಲಂಕಾದ ಕ್ಯಾಸಿನೋದಲ್ಲಿ ಟೇಬಲ್ ಹೊಂದಿದ್ದಾರೆ. ರಾಹುಲ್ ವ್ಯವಹಾರ ನಿರ್ವಹಿಸ್ತಿದ್ದಾನೆ ಎಂದು ನಂಬಿಸಿದ್ದ ರಾಮಕೃಷ್ಣರಾವ್, ಹಲವು ಬಾರಿ ಫೋನ್ನಲ್ಲಿ ಮಾತುಕತೆ ನಡೆಸಿ, ಹೆಚ್ಚಿನ ಬಡ್ಡಿಯ ಭರವಸೆ ನೀಡಿದ್ದಾರೆ. ಮೊದಲು ರಾಹುಲ್ ಬ್ಯಾಂಕ್ ಖಾತೆಗೆ 30 ಲಕ್ಷ ರೂಪಾಯಿ ಜಮೆ ಮಾಡಲಾಗಿದೆ. ಜೊತೆಗೆ ದೂರುದಾರರಿಗೆ ಶ್ರೀಲಂಕಾಗೆ ಟಿಕೆಟ್, ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ವಿವೇಕ್ ಮತ್ತು ನವೀನ್ ಚಂದ್ರ ಕೊಠಾರಿ ಶ್ರೀಲಂಕಾಗೂ ಹೋಗಿದ್ದರು. ಈ ವೇಳೆ ಬೆಲ್ಲಾ, ಜಿಯೋ ಕ್ಯಾಸಿನೋಗೆ ಕರೆದೊಯ್ದು ನಂಬಿಸಿದ್ದರು.
ಹೀಗೆ ನಾಟಕವಾಡಿ 3.5 ಕೋಟಿ ರೂ. ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ್ದು, ಜೊತೆಗೆ ಹೂಡಿಕೆ ನೆಪದಲ್ಲಿ ವಿವೇಕ್ ಸ್ನೇಹಿತರ ಮೂಲಕ 22 ಕೋಟಿ ರೂ. ನೀಡಲಾಗಿತ್ತು. ಹಣ ವಾಪಸ್ ಕೇಳಿದಾಗ ಆರೋಪಿ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಾರೆ. ಬಳಿಕ ಉದ್ಯಮಿ ವಿವೇಕ್ ಹೆಗ್ಡೆ ಬಸವೇಶ್ವರ ನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಸಿಕೊಂಡು ಪ್ರಮುಖ ಆರೋಪಿ ರಾಮಕೃಷ್ಣರಾವ್ ಬಂಧಿಸಿದ್ದು, 10 ದಿನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಆರೋಪಿ ರಾಹುಲ್ ತೋನ್ಸೆ ಐದು ವರ್ಷಗಳ ಹಿಂದೆ ಡ್ರಗ್ಸ್ ಪ್ರಕರಣಲ್ಲಿಯೂ ಭಾಗಿಯಾಗಿದ್ದ. 45 ಲಕ್ಷ ರೂ. ವಂಚನೆ ಸಂಬಂಧ ಇಂದಿರಾ ನಗರ ಠಾಣೆಯಲ್ಲಿ ರಾಹುಲ್ ತಂದೆ ರಾಮಕೃಷ್ಣ ರಾವ್ ಸೇರಿದಂತೆ ಮೂವರ ವಿರುದ್ಧ ನಟಿ ಸಂಜನಾ ಗಲ್ರಾನಿ ದೂರು ದಾಖಲಿಸಿದ್ದರು. ರಾಹುಲ್ ಶ್ರೀಲಂಕಾದಲ್ಲಿ ಕ್ಯಾಸಿನೊ ವ್ಯವಹಾರ ನಡೆಸುತ್ತಿದ್ದ ಬಗ್ಗೆಯೂ ದೂರಿನಲ್ಲಿತ್ತು. ಸಿಸಿಬಿ ಪೊಲೀಸರು ಅಂದು ಆತನನ್ನು ಬಂಧಿಸಿದ್ದು ಆನಂತರ ಜಾಮೀನಿನಲ್ಲಿ ಹೊರಬಂದು ಉದ್ಯಮಿಗೆ ಕೈಕೊಟ್ಟಿದ್ದಾನೆ.
Discover more from Coastal Times Kannada
Subscribe to get the latest posts sent to your email.
Discussion about this post