ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಂಡಿದ್ದ 16 ವರ್ಷದ ಬಾಲಕಿಯ ಶವವನ್ನು ಹೂತು ಹಾಕಿದ್ದ ಪ್ರಕರಣದಲ್ಲಿ ಶಿಕಾರಿಪುರ ಟೌನ್ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ, ಪಿಜಿ ನಡೆಸುತ್ತಿದ್ದ ಸೌಭಾಗ್ಯ, ಆಕೆಯ ಪತಿ ಗಂಗಾನಾಯ್ಕ್ , ರಂಜಿತಾ ಹಾಗೂ ಆಕೆಯ ಸ್ನೇಹಿತ ಪಿರ್ಯಾನಾಯ್ಕ್ ಎಂಬವರನ್ನು ಬಂಧಿಸಿದ್ದಾರೆ.
ಘಟನೆ : ಜುಲೈ 3 ರಂದು ಶಿಕಾರಿಪುರ ತಾಲೂಕು ತರಲಘಟ್ಟದ ನಿವಾಸಿ ಪರಮೇಶ್ ಎಂಬಾತ ತನ್ನ ಮಗಳು ಸಂಗೀತಾ 2025ರ ಜೂನ್ 18 ರಿಂದ ಕಾಣೆಯಾಗಿದ್ದಾಳೆ ಎಂದು ಶಿಕಾರಿಪುರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶಿಕಾರಿಪುರದಲ್ಲಿ ಸೌಭಾಗ್ಯ ಪಿಜಿ ಮತ್ತು ಅದೇ ಕಟ್ಟಡದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಸಂಗೀತಾ ಅದೇ ಪಿಜಿಯಲ್ಲಿದ್ದು, ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಈ ಪಿಜಿಗೆ ಸಂಗೀತಾಳನ್ನು ರಂಜಿತಾ ಎಂಬ ಮಹಿಳೆ ಕರೆತಂದು ಸೇರಿಸಿದ್ದಳು.
ಮೃತ ಸಂಗೀತಾ, ರಂಜಿತಾ ಹಾಗೂ ಸೌಭಾಗ್ಯರ ನಡುವೆ ಚಾಡಿ ಹೇಳಿದ್ದಳು. ಇದರಿಂದ ಇಬ್ಬರ ನಡುವೆ ಜಗಳ ಆಗಿತ್ತು. ನಂತರ ಸೌಭಾಗ್ಯ, ಗಂಗಾ ನಾಯ್ಕ್, ರಂಜಿತಾ ಹಾಗೂ ಪಿರ್ಯಾನಾಯ್ಕ್ ಅವರು ಸಂಗೀತಾರನ್ನು ಕರೆದು ಹೀಗೆ ಮಾಡಬಾರದು ಎಂದು ಬೈಯ್ದಿದ್ದರು. ಇದರಿಂದ ಬೇಸರಗೊಂಡ ಸಂಗೀತಾ ತಾನು ಇದ್ದ ಪಿಜಿಯ ರೂಂನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವಿಷಯ ತಿಳಿದ ನಾಲ್ವರು ಭಯಗೊಂಡು ಆಕೆಯ ಶವವನ್ನು ಸೂಟ್ಕೇಸ್ನಲ್ಲಿ ತೆಗೆದುಕೊಂಡು ಶಿರಸಿಯ ಸಿದ್ದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಿನಲ್ಲಿ ಹೂತು ಹಾಕಿದ್ದರು.
ಈ ವಿಷಯವನ್ನು ಈ ನಾಲ್ವರು ಎಲ್ಲೂ ಬಾಯ್ಬಿಟ್ಟಿರಲಿಲ್ಲ. ಆದರೆ, ಇತ್ತಿಚೇಗೆ ರಂಜಿತಾ ಹಾಗೂ ಪಿರ್ಯಾನಾಯ್ಕ್ ನಡುವೆ ಜಗಳ ನಡೆದಿತ್ತು. ಇದರಿಂದ ರಂಜಿತಾ ಪಿರ್ಯನಾಯ್ಕ್ನ ಮೇಲೆ ಕೋಪಗೊಂಡು ಸಂಗೀತಾ ತಂದೆ ಪರಮೇಶ್ವರ ಬಳಿ ನಡೆದಿದ್ದ ವಿಷಯ ಹೇಳಿದ್ದಳು. ಇದರಿಂದ ಪರಮೇಶ್ವರ ನಾಯ್ಕ್ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಎಸ್ಪಿ ನಿಖಿಲ್ ಬಿ ಮಾತನಾಡಿ, ಶಿಕಾರಿಪುರ ನಗರ ಪೊಲೀಸ್ ಠಾಣೆಯಲ್ಲಿ 2026ರ ಜುಲೈ 3 ರಂದು ಸಂಗೀತಾ ಎಂಬ 16 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ ಎಂದು ಬಾಲಕಿಯ ತಂದೆ ದೂರು ನೀಡಿದ್ದರು. ಈಕೆ 2025ರ ಜೂನ್ 18 ರಿಂದ ಕಾಣೆಯಾಗಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಾಲಕಿ 2025ರ ಜೂನ್ 18 ರಂದು ತಾನು ಇದ್ದ ಪಿಜಿಯಲ್ಲೇ ನೇಣಿಗೆ ಶರಣಾಗಿದ್ದಳು ಎಂಬ ವಿಚಾರ ತನಿಖೆಯಿಂದ ತಿಳಿದು ಬಂದಿದೆ. ಆದರೆ, ಈ ವಿಚಾರವನ್ನು ಯಾರಿಗೂ ತಿಳಿಸದೇ ಪಿಜಿ ಮಾಲಕಿ ಸೌಭಾಗ್ಯ ಆಕೆಯ ಪತಿ ಗಂಗಾನಾಯ್ಕ್, ರಂಜಿತಾ ಹಾಗೂ ಪಿರ್ಯಾನಾಯ್ಕ್ ಸೇರಿ ಬಾಲಕಿ ಶವವನ್ನು ಸೂಟ್ಕೇಸ್ನಲ್ಲಿ ತೆಗೆದುಕೊಂಡು ಹೋಗಿ ಸಿದ್ದಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಾವಿನ ಗುಂಡಿಯಲ್ಲಿ ಹೂತು ಹಾಕಿದ್ದರು ಎಂದು ತಿಳಿಸಿದರು.
ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಅವರೇ ಮಾತನಾಡಿಕೊಂಡು ಒಂದು ವರ್ಷದ ತನಕ ಯಾರೂ ಬಾಯಿ ಬಿಟ್ಟಿರಲಿಲ್ಲ. ತನಿಖೆ ಮುಂದುವರೆಸಿದಾಗ ಆಕೆ ಫೋನ್ನಲ್ಲಿ ಕಳೆದ 1 ವರ್ಷದಿಂದ ಮಾತನಾಡಿರುವುದಿಲ್ಲ. ಕೊನೆಯದಾಗಿ ರಂಜಿತಾ ಜೊತೆ ಮಾತನಾಡಿರುವುದು ಕಂಡುಬಂದಿದೆ. ನಂತರ ತನಿಖೆ ಮುಂದುವರೆದಂತೆ, ರಂಜಿತಾ, ಸೌಭಾಗ್ಯ, ಗಂಗನಾಯ್ಕ್ ಹಾಗೂ ಪಿರ್ಯನಾಯ್ಕ್ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಸಾವನ್ನಪ್ಪಿರುವ ಬಾಲಕಿಯು ಸೌಭಾಗ್ಯ ಹಾಗೂ ರಂಜಿತಾ ನಡುವೆ ಚಾಡಿ ಹೇಳಿದ್ದಳು. ಇದರಿಂದ ಬಾಲಕಿಯನ್ನು ಪಿಜಿ ಕೆಳಗೆ ಬ್ಯೂಟಿ ಪಾರ್ಲರ್ಗೆ ಕರೆದು ಸೌಭಾಗ್ಯ, ರಂಜಿತಾ ಹಾಗೂ ಪಿರ್ಯಾನಾಯ್ಕ್ ಮಾತನಾಡಿದಾಗ ಮಾತಿನ ಚಕಮಕಿ ನಡೆದಿದೆ. ಇದರಿಂದ ಆಕೆ ಬೇಸರಗೊಂಡು ನೇಣಿಗೆ ಶರಣಾಗಿದ್ದಾಳೆ. ಆಕೆ ಸಾವನ್ನಪ್ಪಿದ್ದರಿಂದ ಆಕೆಯ ಶವವನ್ನು ನಾಲ್ವರು ಸೇರಿ ಸೂಟ್ಕೇಸ್ನಲ್ಲಿ ಹಾಕಿ ಕಾರಿನಲ್ಲಿ ತೆಗೆದುಕೊಂಡು ಹೋಗಿ ಮಾವಿನ ಗುಂಡಿಯ ಅರಣ್ಯದಲ್ಲಿ ಹೂತು ಹಾಕಿದ್ದಾರೆ. ವಿಚಾರಣೆ ವೇಳೆ ಎಲ್ಲರೂ ಸತ್ಯ ಬಾಯ್ಬಿಟ್ಟಿದ್ದಾರೆ. ಶವ ಹೂತ ಜಾಗವನ್ನು ತೋರಿಸಿದ್ದು, ಶವವನ್ನು ಹೊರ ತೆಗೆದಾಗ ಆಕೆಯ ತಲೆ ಬುರುಡೆ ಹಾಗೂ ಮೂಳೆಗಳು ಸೂಟ್ಕೇಸ್ನಲ್ಲಿ ಪತ್ತೆಯಾಗಿದೆ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿ ಇರುವುದರಿಂದ ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡಲಾಗಲ್ಲ ಎಂದರು.
ಮೃತ ಬಾಲಕಿಯ ತಂದೆ ಪರಮೇಶ್ ಮಾತನಾಡಿ, ನಮ್ಮ ಮನೆ ಬಿದ್ದಿದ್ದ ಕಾರಣಕ್ಕೆ ನಾನು ಹಾಗೂ ಮಗಳು ನಮ್ಮ ತಂಗಿ ಮನೆಯಲ್ಲಿದ್ದೆವು. ಆಗ ನಾಗರಾಜ್, ಉಮ್ಮಕ್ಕ, ಪರಮೇಶ್ ರವರು ನನ್ನ ಬಳಿ ಬಂದು ನಮ್ಮ ಅಕ್ಕನ ಪಿಜಿ ಶಿಕಾರಿಪುರದಲ್ಲಿದೆ. ಅಲ್ಲಿ ಇರ್ತಾಳೆ ಎಂದು ಕರೆದುಕೊಂಡು ಹೋದರು. ಅವರು ನನ್ನ ಆರೋಗ್ಯ, ಮನೆ ಖರ್ಚು ಎಲ್ಲವನ್ನು ನೋಡಿಕೊಳ್ಳುತ್ತೇವೆ ಎಂದು ಕರೆದುಕೊಂಡು ಹೋದರು. ನಂತರ ನನ್ನ ಮಗಳು ಎಲ್ಲಿ ಎಂದು ಪಿಜಿ ಬಳಿ ಹೋಗಿ ಕೇಳಿದಾಗ ಅವರು ನಿನ್ನ ಮಗಳು ಓಡಿ ಹೋಗಿದ್ದಾಳೆ ಎಂದರು. ಆಗ ನಾನು ಇದನ್ನು ನನಗೆ ಹೇಳಬಹುದಾಗಿತ್ತು. ನನಗೆ ಯಾಕೆ ತಿಳಿಸಲಿಲ್ಲ ಎಂದು ಕೇಳಿದೆ. ನಾನು ಅವರಿಗೆ ಪೋನ್ ಮಾಡಿದಾಗಲೆಲ್ಲಾ ಬೆಂಗಳೂರಿನಲ್ಲಿರುವುದಾಗಿ ಎಂದು ಹೇಳುತ್ತಿದ್ದರು. ನನ್ನ ಮಗಳ ಸಾವಿಗೆ ನ್ಯಾಯಬೇಕು ಎಂದು ಮನವಿ ಮಾಡಿದರು.

Discover more from Coastal Times Kannada
Subscribe to get the latest posts sent to your email.








Discussion about this post