ಅಟ್ಲಾಂಟ, ಜು. 7: ಎರಡು ಗೋಲುಗಳ ಹಿನ್ನಡೆಯಿಂದ ಕೊನೆಯ ಕ್ಷಣಗಳಲ್ಲಿ ಅದ್ಭುತವಾಗಿ ಪುಟಿದೆದ್ದ ಹಾಲಿ ಚಾಂಪಿಯನ್ ಅರ್ಜೆಂಟೀನ ತಂಡ, ಈಜಿಪ್ಟ್ ವಿರುದ್ಧ 3–2 ಗೋಲುಗಳ ರೋಚಕ ಗೆಲುವು ದಾಖಲಿಸಿ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿತು.
ಮಂಗಳವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 79ನೇ ನಿಮಿಷದವರೆಗೆ 0–2 ಗೋಲುಗಳ ಹಿನ್ನಡೆಯಲ್ಲಿದ್ದ ಅರ್ಜೆಂಟೀನ, ನಂತರ ಸತತ ಮೂರು ಗೋಲುಗಳನ್ನು ಗಳಿಸಿ ಪಂದ್ಯವನ್ನು ತನ್ನ ಪರ ತಿರುಗಿಸಿಕೊಂಡಿತು. ಪಂದ್ಯದ 15ನೇ ನಿಮಿಷದಲ್ಲಿ ಯಾಸೀರ್ ಇಬ್ರಾಹೀಂ ಗೋಲು ಗಳಿಸಿ ಈಜಿಪ್ಟ್ ತಂಡಕ್ಕೆ 1–0 ಮುನ್ನಡೆ ತಂದುಕೊಟ್ಟರು. ಮೊದಲಾರ್ಧದಲ್ಲಿ ಅರ್ಜೆಂಟೀನದ ನಾಯಕ ಲಿಯೊನೆಲ್ ಮೆಸ್ಸಿಗೆ ದೊರೆತ ಪೆನಾಲ್ಟಿ ಅವಕಾಶ ಕೈತಪ್ಪಿತು.

67ನೇ ನಿಮಿಷದಲ್ಲಿ ಮುಸ್ತಾಫಾ ಝಿಕೊ ಗೋಲು ಗಳಿಸುವ ಮೂಲಕ ಈಜಿಪ್ಟ್ ತಂಡ ತನ್ನ ಮುನ್ನಡೆಯನ್ನು 2–0ಕ್ಕೆ ಹೆಚ್ಚಿಸಿ ಅರ್ಜೆಂಟೀನವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿತು. ಇನ್ನು ಈ ಪಂದ್ಯದಲ್ಲಿ ಅರ್ಜೇಂಟಿನಾ ಸೋಲುತ್ತದೆ ಎಂದು ಭಾವಿಸಲಾಗಿತ್ತು. ಆದರೆ 79 ನಿಮಿಷದಲ್ಲಿ ಕ್ರಿಸ್ಟಿಯನ್ ರೊಮೆರೊ ಮೊದಲ ಗೋಲು ಬಾರಿಸಿದರು. ಇದರ ಬೆನ್ನಲ್ಲೇ ಆಟ ಕೊನೆಯ ಹಂತದಲ್ಲಿ ಅಂದರೆ 83 ನಿಮಿಷಕ್ಕೆ ಲಿಯೋನೆಲ್ ಮೆಸ್ಸಿ ತಂಡದ ಪರವಾಗಿ ಎರಡನೇ ಗೋಲು ಬಾರಿಸಿದರು. ಅಂತಿಮವಾಗಿ 93ನೇ ನಿಮಿಷಕ್ಕೆ ಅರ್ಜೇಂಟೀನಾ ಪರ ಎಂಜೊ ಫೆರ್ನಾಂಡಿಸ್ ಮೂರನೇ ಗೋಲು ಬಾರಿಸಿ ಅರ್ಜೇಂಟೀನಾಗೆ ಗೆಲುವು ತಂದುಕೊಟ್ಟರು.

Discover more from Coastal Times Kannada
Subscribe to get the latest posts sent to your email.







Discussion about this post