ಬೆಂಗಳೂರು: ಬ್ಯಾಂಕಾಕ್ ನಲ್ಲಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥೀವ ಶರೀರ ಬೆಂಗಳೂರಿಗೆ ಆಗಮಿಸಿದ್ದು, ಮಲ್ಲೇಶ್ವರಂನಲ್ಲಿರುವ ಸ್ಪಂದನಾ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಬಿಕೆ ಶಿವರಾಂ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ತರಲಾಗಿದೆ.
ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಾರ್ಥಿವ ಶರೀರ ಹೊತ್ತ ವಿಮಾನ ಬೆಂಗಳೂರಿಗೆ ಆಗಮಿಸಿದ್ದು, ಬ್ಯಾಂಕಾಕ್‌ನಿಂದ ಕಾರ್ಗೋ ವಿಮಾನದಲ್ಲಿ ತರಲಾದ ಮೃತದೇಹವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುಮಾರು 30 ನಿಮಿಷಗಳ ಕಸ್ಟಮ್ಸ್ ಕ್ಲಿಯರೆನ್ಸ್ ಪ್ರಕ್ರಿಯೆ ಮುಗಿಸಿದ ಬಳಿಕ ಪಾರ್ಥಿವ ಶರೀರವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಸ್ಪಂದನಾ ಅವರ ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್, ಶಾಸಕ ಮುನಿರತ್ನ, ಮಾವ ಚಿನ್ನೇಗೌಡ, ನಟ ಶ್ರೀಮುರಳಿ, ಸ್ಪಂದನಾ ಸಹೋದರ ರಕ್ಷಿತ್ ಸೇರಿದಂತೆ ಹಲವರು ಸ್ಥಳದಲ್ಲಿದ್ದು ಮೃತದೇಹವನ್ನು ಪಡೆದುಕೊಂಡು ವಿಜಯ್ ರಾಘವೇಂದ್ರ ಅವರನ್ನು ಕಾರಿನಲ್ಲಿ ಮನೆಗೆ ಕರೆದೊಯ್ದರು. ವಿಮಾನ ನಿಲ್ದಾಣದಲ್ಲಿ ಪ್ರಕ್ರಿಯೆ ಮುಗಿಸಿ ಮಲ್ಲೇಶ್ವರಂಗೆ ಮೃತದೇಹ ರವಾನೆ ಮಾಡಲಾಯಿತು. ಸ್ಪಂದನಾ ಅಂತಿಮ ದರ್ಶನಕ್ಕಾಗಿ ಮಲ್ಲೇಶ್ವರಂ ನಲ್ಲಿರುವ ಬಿಕೆ ಶಿವರಾಂ ಅವರ ಮನೆ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ.
ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಮಲ್ಲೇಶ್ವರಂ ಸ್ಪಂದನಾ ನಿವಾಸದ ಮುಂಭಾಗ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಪಂದನಾ ಸಹೋದರ ರಕ್ಷಿತ್ ಶಿವರಾಂ, ಮಾವ ಚಿನ್ನೇಗೌಡ ನೇತೃತ್ವದಲ್ಲಿ ಅಂತಿಮ ದರ್ಶನಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ವಿಜಯ ರಾಘವೇಂದ್ರ ಕುಟುಂಬ ಕೂಡ ಸ್ಪಂದನಾ ಅವರ ತವರು ಮನೆಗೆ ಆಗಮಿಸಿದೆ. ಬುಧವಾರ ಅಂದರೆ ನಾಳೆ ಮಧ್ಯಾಹ್ನ 1 ಗಂಟೆಯವರೆಗೂ ಸ್ಪಂದನಾ ಅವರ ಪಾರ್ಥಿವ ಶರೀರವನ್ನ ಸಾರ್ವಜನಿಕರ ದರ್ಶನಕ್ಕೆ ಇಟ್ಟು, ನಂತರ ಬೆಂಗಳೂರಿನ ಶ್ರೀರಾಂಪುರದ ಹರಿಶ್ಚಂದ್ರ ಘಾಟ್ ನಲ್ಲಿ ಅಂತಿಮ ಸಂಸ್ಕಾರ ಮಾಡಲಾಗುವುದು. ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿಯೇ ಪ್ರಕ್ರಿಯೆಗಳನ್ನೆಲ್ಲಾ ಪೂರೈಸಿ ಥಾಯ್ಲೆಂಡ್ ಏರ್‌ಲೈನ್ಸ್‌ನ ವಿಶೇಷ ವಿಮಾನದ ಮೂಲಕ ಸ್ಪಂದನಾ ಮೃತದೇಹವನ್ನು ಬೆಂಗಳೂರಿಗೆ ತರಲಾಗಿದೆ. ಥಾಯ್ಲೆಂಡ್‌ನಲ್ಲಿದ್ದ ವಿಜಯ ರಾಘವೇಂದ್ರ, ಬಿ.ಕೆ. ಶಿವರಾಮ್ ಹಾಗೂ ಸೋದರ ರಕ್ಷಿತ್ ಶಿವರಾಮ್ ಆಗಮನದ ಬಳಿಕ ಮುಂದೆ ನಡೆಸಬೇಕಾದ ಕ್ರಮಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಮಂಗಳವಾರ ರಾತ್ರಿಯಿಂದಲೇ ವಿಜಯ ರಾಘವೇಂದ್ರ ಹಾಗೂ ಶಿವರಾಮ್ ಕುಟುಂಬದ ಸದಸ್ಯರು, ಸ್ನೇಹಿತರು, ಆಪ್ತರು, ಗಣ್ಯರು ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸುತ್ತಿದ್ದಾರೆ. ಬುಧವಾರ ಸಾರ್ವಜನಿಕ ದರ್ಶನ ಮುಗಿದ ಬಳಿಕ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನಡೆಯಲಿದೆ.
ವಾರದ ಹಿಂದೆ ಸ್ನೇಹಿತರ ಜತೆಗೆ ಥಾಯ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಸ್ಪಂದನಾ ಪ್ರವಾಸದುದ್ದಕ್ಕೂ ಆರೋಗ್ಯವಾಗಿದ್ದರು. ಬ್ಯಾಂಕಾಕ್‌ನ ಹಾಲಿಡೇ ಇನ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಸ್ಪಂದನಾ ಭಾನುವಾರ ತಡರಾತ್ರಿ ಮಲಗಿದವರು ಬೆಳಗ್ಗೆ ಎದ್ದಿಲ್ಲ. ಸೋಮವಾರ ಬೆಳಗಿನ ಜಾವದ ಹೊತ್ತಿಗೆ ಲೋ ಬಿಪಿ ಜತೆಗೆ ತೀವ್ರ ಹೃದಯಾಘಾತ ಆಗಿದ್ದರಿಂದ ಮಲಗಿದಲ್ಲೇ ಕೊನೆಯುಸಿರೆಳೆದಿದ್ದಾರೆ.
Discussion about this post