ಪಂಜಾಬ್ (ಮೊಹಾಲಿ): ಸೋಮವಾರ ರಾತ್ರಿ ನಗರದಲ್ಲಿರುವ ರಾಜ್ಯ ಗುಪ್ತಚರ ವಿಭಾಗದ ಕೇಂದ್ರ ಕಚೇರಿಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಪರಾರಿಯಾಗಿದ್ದಾರೆ. ಇದರಿಂದಾಗಿ ಕಟ್ಟಡದ ಗಾಜುಗಳು ಒಡೆದಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಮೊಹಾಲಿಯ ಸೆಕ್ಟರ್ 77 ರಲ್ಲಿರುವ ಪಂಜಾಬ್ ಪೊಲೀಸ್ ಇಂಟೆಲಿಜೆನ್ಸ್ ಕಟ್ಟಡದಲ್ಲಿ ರಾತ್ರಿ 7:45ಕ್ಕೆ ಘಟನೆ ನಡೆದಿದೆ. ಮೊದಲಿಗೆ ಇದೊಂದು ಭಯೋತ್ಪಾದಕ ದಾಳಿ ಎಂದೇ ಹೇಳಲಾಗಿತ್ತು. ಆದ್ರೆ ಮೊಹಾಲಿ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಭಯೋತ್ಪಾದಕರ ಕೃತ್ಯ ಅಲ್ಲ ಎಂದು ಸ್ಪಷ್ಟಪಡಿಸಿದರು. ಸ್ಫೋಟದ ನಂತರ ವಿಧಿ ವಿಜ್ಞಾನ ತಜ್ಞರ ತಂಡ ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸಿತು. ಕಟ್ಟಡದ ಸುತ್ತಮುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಪಂಜಾಬ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಇದೇ ರೀತಿಯ ಘಟನೆಗಳು ನಡೆಯುತ್ತಿವೆ. ಇತ್ತೀಚೆಗೆ ಕರ್ನಾಲ್ ಬಳಿಕ ತರ್ನ್ ತರನ್ ಜಿಲ್ಲೆಯಲ್ಲಿ ಲೋಹದ ಕಪ್ಪು ಪೆಟ್ಟಿಗೆಯಲ್ಲಿ ಆರ್‌ಡಿಎಕ್ಸ್ ಪ್ಯಾಕ್ ದೊರೆತಿತ್ತು. ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು 2.5 ಕೆಜಿ ಆರ್‌ಡಿಎಕ್ಸ್ ವಶಪಡಿಕೊಂಡಿದ್ದರು. ಇದಾದ ಬಳಿಕ ನಿನ್ನೆ ರಾತ್ರಿ ದಾಳಿ ನಡೆದಿದೆ. ಗುಪ್ತಚರ ಕಚೇರಿಯ ಮೂರನೇ ಮಹಡಿಗೆ ರಾಕೆಟ್ ಚಾಲಿತ ಗ್ರೆನೇಡ್ ಎಸೆಯಲಾಗಿದೆ ಎನ್ನಲಾಗ್ತಿದೆ. ಹೀಗಾಗಿ, ಸ್ಫೋಟ ಸಂಭವಿಸಿದ್ದು, ರಭಸಕ್ಕೆ ಕಟ್ಟಡದ ಕಿಟಕಿಗಳು ಒಡೆದಿವೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಹಿರಿಯ ಪೊಲೀಸ್ ಅಧಿಕಾರಿ ನಿರಾಕರಿಸಿದ್ದಾರೆ. ಪಂಜಾಬ್ ಸಿಎಂ ಈಗಾಗಲೇ ಡಿಜಿಪಿಯಿಂದ ವಿಸ್ತೃತ ವರದಿ ಕೇಳಿದ್ದಾರೆ.