ಮಂಗಳೂರು: ಮಾರುಕಟ್ಟೆಗಳಲ್ಲಿ ವಿವಿಧ ಹಣ್ಣುಗಳಿಂದ ಮಾಡಿದ ವೈನ್ಗಳು ದೊರೆಯುತ್ತದೆ. ಆದರೆ ಗೇರು ಹಣ್ಣಿನ ವೈನ್ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಸಾಮಾನ್ಯವಾಗಿ ಮರದಿಂದ ಗೇರುಹಣ್ಣು ಕೊಯ್ದು ಗೋಡಂಬಿಯನ್ನು ಮಾತ್ರ ಚೀಲಕ್ಕೆ ತುಂಬಿ ಹಣ್ಣನ್ನು ಬಿಸಾಡಲಾಗುತ್ತದೆ. ಹೀಗೆ ವ್ಯರ್ಥವಾಗುವ ಹಣ್ಣಿನಿಂದಲೇ ಮಂಗಳೂರಿನ ಪ್ರೊಫೆಸರ್ ಒಬ್ಬರು ವೈನ್ ತಯಾರಿಸಿ ಯಶಸ್ವಿಯಾಗಿದ್ದಾರೆ. ಎನ್ಐಟಿಕೆ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಪ್ರಸನ್ನ ಬಿ.ಡಿ. ಅವರು ಗೇರುಹಣ್ಣಿನಿಂದ ವೈನ್ ತಯಾರಿಸಿ ಯಶಸ್ವಿಯಾಗಿದ್ದಾರೆ. 2010ರಲ್ಲಿಯೇ ಇವರು ವೈನ್ ತಯಾರಿಸಿ ಯಶ ಕಂಡಿದ್ದರು. ಆದರೆ ಇದೀಗಷ್ಟೆ ಭಾರತೀಯ ಪೇಟೆಂಟ್ ದೊರೆತಿದೆ. ಉಳಿದ ಹಣ್ಣಿನಿಂದ ಮಾಡುವ ವೈನ್ಗಿಂತಲೂ ಗೇರು ಹಣ್ಣಿನಲ್ಲಿ ಮಾಡುವ ವೈನ್ಗೆ ಸವಾಲುಗಳು ಜಾಸ್ತಿ. ಗೇರು ಹಣ್ಣಿನಿಂದ ಮಾಡುವ ಮದ್ಯದಲ್ಲಿರುವ ವಾಸನೆ, ಬಣ್ಣದಿಂದಾಗಿ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಇದಕ್ಕಾಗಿ ಈ ಪ್ರೊಫೆಸರ್ ವಿಶೇಷ ಪ್ರಯತ್ನ ಮಾಡಿ ಇದರ ವಾಸನೆ, ಬಣ್ಣವನ್ನು ಮಾರ್ಪಾಡು ಮಾಡುವಲ್ಲಿ ಸಫಲರಾಗಿದ್ದಾರೆ.
ಗೇರುಹಣ್ಣಿನ ಮದ್ಯವನ್ನು ಗೋವಾದಲ್ಲಿ ತಯಾರಿಸಲಾಗುತ್ತಿದ್ದರೂ ಉಳಿದೆಡೆ ಲಭ್ಯವಿಲ್ಲ. ಗೋವಾದಲ್ಲಿ ಗೇರುಹಣ್ಣನ್ನು ಕೊಳೆಸಿ ಮದ್ಯ ತಯಾರಿಕೆ ಮಾಡಲಾಗುತ್ತದೆ. ಆದರೆ ಇದರಿಂದ ವೈನ್ ತಯಾರಿಸುತ್ತಿರುವುದು ಇದೇ ಮೊದಲು. ಈ ವೈನ್ನಲ್ಲಿ ಗೇರು ಹಣ್ಣಿನ ಮದ್ಯದಂತೆ ಕಿಕ್ ಇಲ್ಲ. ಇದರ ಆಲ್ಕೊಹಾಲ್ ಪ್ರಮಾಣವನ್ನು ಶೇಕಡಾ 8 ರಿಂದ 15 ಶೇಕಡಾದವರೆಗೆ ಇಳಿಸಲಾಗಿದೆ. ಗ್ಲಾಸ್ಗೆ ವೈನ್ ಸುರಿದಾಗ ಹಿತವಾದ ಪರಿಮಳ ಬಂದರೆ, ಕುಡಿದಾಗ ಹುಳಿ, ಸಿಹಿ ಹಾಗೂ ಒಗರುಮಿಶ್ರಿತ ರುಚಿಯಿರುವಂತೆ ಮಾಡಲಾಗಿದೆ. ಗೇರುಹಣ್ಣಿನ ವೈನನ್ನು ಗುಣಮಟ್ಟದ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಲಾಗಿದೆ. 500 ಲೀಟರ್ ಸಾಮರ್ಥ್ಯ ಇರುವ ಪ್ಲಾಂಟ್ನಲ್ಲಿ ವೈನ್ ತಯಾರಿಸಿ ಅದಕ್ಕೆ ತಗುಲುವ ಖರ್ಚು ವೆಚ್ಚಗಳು ಮತ್ತು ಯಾವ ರೀತಿಯಲ್ಲಿ ತಯಾರು ಮಾಡಬಹುದು ಎಂದು ಪ್ರಯೋಗ ಮಾಡಲಾಗಿದೆ. 2010ರಲ್ಲಿಯೇ ಇವರು ವೈನ್ ತಯಾರಿಸುವ ಸಂಶೋಧನೆ ಆರಂಭಿಸಿ ಯಶಸ್ವಿಯಾಗಿದ್ದು 2012 ರಲ್ಲಿ ಪೇಟೆಂಟ್ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಇದಕ್ಕೆ ಪೇಟೆಂಟ್ ದೊರೆತಿದೆ. ಪೇಟೆಂಟ್ ಅನ್ನು ಎನ್ಐಟಿಕೆಗೆ ನೀಡಲು ನಿರ್ಧರಿಸಲಾಗಿದ್ದು, ಅವರ ಮೂಲಕ ವೈನ್ ತಯಾರಕರಿಗೆ ಸಿಗಲಿದೆ. ಮದ್ಯ ತಯಾರಿಕರ ಮೂಲಕ ಹೊಸ ರುಚಿಯ ಗೇರುಹಣ್ಣಿನ ವೈನ್ ಮಾರುಕಟ್ಟೆಗೆ ಲಭ್ಯವಾಗಲಿದೆ.
Discussion about this post