ಉಳ್ಳಾಲ: ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡು ವುದಕ್ಕಾಗಿ ಯೆನೆಪೋಯ ವಿಶ್ವವಿದ್ಯಾಲ ಯವು ಟಾಟಾ ಟ್ರಸ್ಟ್ ಸಹಯೋಗದಲ್ಲಿ ಸ್ಥಾಪಿಸಿರುವ ಜುಲೇಖಾ ಯೆನೆಪೋಯ ಆಂಕಾಲಜಿ ಇನ್‌ಸ್ಟಿಟ್ಯೂಟ್ ಉದ್ಘಾಟ ನೆಗೆ ಸಜ್ಜಾಗಿದೆ ಎಂದು ಕುಲಪತಿ ಎಂ.ವಿಜಯಕುಮಾರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕ್ಯಾನ್ಸರ್‌ನಿಂದ ನಿಧನರಾಗಿರುವ ಜುಲೇಖಾ ಅವರ ಹೆಸರನ್ನು ಸಂಸ್ಥೆಗೆ ಇಡಲಾಗಿದೆ. ಇವರು ಯೆನೆಪೋಯ ವಿವಿ ಕುಲಾಧಿಪತಿ ಅಬ್ದುಲ್ ಕುಂಞಿ ಅವರ ತಾಯಿ. ಕಳೆದ ಫೆಬ್ರವರಿಯಲ್ಲಿ ಕಟ್ಟಡ ಪೂರ್ಣಗೊಂಡಿದೆ. ಒಂದು ತಿಂಗಳಿನಿಂದ ಕೇರಳ, ಉಡುಪಿ ಮತ್ತು ಕರ್ನಾಟಕದ ಉತ್ತರ ಭಾಗಗಳ ಸುಮಾರು 50 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಆಂಕಾಲಜಿ ವಿಭಾಗದ ಮುಖ್ಯಸ್ಥ ಜಲಾಲುದ್ದೀನ್ ಅಕ್ಬರ್ ಮಾತನಾಡಿ, ಸಂಸ್ಥೆಯಲ್ಲಿ ರೇಡಿಯೊಥೆರಪಿ ಮತ್ತು ನ್ಯೂಕ್ಲಿಯರ್ ಮೆಡಿಸಿನ್ ವಿಭಾಗಗಳನ್ನು ಸೇರ್ಪಡೆಗೊಳಿಸಲಾಗಿದೆ. ಚಿಕಿತ್ಸಾ ಸೌಲಭ್ಯಗಳನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಇಲ್ಲಿ ಕ್ಯಾನ್ಸರ್‌ಗೆ ಎಲ್ಲ ರೀತಿಯ ಚಿಕಿತ್ಸೆ ಸಿಗಲಿದೆ. ಕೇಂದ್ರವು 36 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ. ಕಟ್ಟಡದಲ್ಲಿ ಆರು ಮಹಡಿಗಳಿದ್ದು, ಎರಡು ರೇಡಿಯೊ ಥೆರಪಿ ಬಂಕರ್‌ಗಳು, ಒಂದು ಬ್ರಾಕಿ ಥೆರಪಿ ಬಂಕರ್ ಇವೆ. ಟ್ರೂ ಭೀಮ್ ರೇಡಿಯೊಥೆರಪಿ ಯಂತ್ರವನ್ನು ಬಳಸಲಾಗುತ್ತಿದೆ ಎಂದರು. ಟ್ರೂ ಬೀಮ್ ರೇಡಿಯೊಥೆರಪಿ ಯಂತ್ರವು ಉದ್ದೇಶಿತ ವಿಧಾನದೊಂದಿಗೆ ಆರೋಗ್ಯಕರ ಅಂಗಾಂಶಗಳಿಗೆ ಹಾನಿಯನ್ನು ಕಡಿಮೆ ಮಾಡುತ್ತದೆ. ದೇಹದ ಎಲ್ಲ ಪರೀಕ್ಷೆಗಳ ಜತೆಗೆ, ಹೆಚ್ಚು ಸುಧಾರಿತ ಪೆಟ್ ಸಿಇಟಿ ಸ್ಕ್ಯಾನರ್, ಸಿ.ಟಿ ಸ್ಕ್ಯಾನ್‌ಗಿಂತ ಬೇಗ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಕೀಮೊಥೆರಪಿಯನ್ನು ನೀಡಲು 10 ಹಾಸಿಗೆಗಳ ಡೇ ಕೇರ್ ಸೌಲಭ್ಯವನ್ನು ಸಹ ಸ್ಥಾಪಿಸಲಾಗಿದೆ ಎಂದು ಡಾ. ವಿಜಯಾ ಹೇಳಿದರು.
2016ರಲ್ಲಿ ಉದ್ಘಾಟನೆಗೊಂಡ ಕ್ಯಾನ್ಸರ್ ಕೇಂದ್ರವು 120 ಹಾಸಿಗೆಗಳ ಕೇಂದ್ರವಾಗಿದೆ. ಕೇಂದ್ರವು 1,100 ಹಾಸಿಗೆಗಳನ್ನು ಹೊಂದಿರುವ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಹೊಂದಿಕೊಂಡಿದೆ. ಅತ್ಯಾಧುನಿಕ ರೇಡಿಯೊಥೆರಪಿ ಚಿಕಿತ್ಸೆಗೆ ರೋಗಿಗೆ ಬೆಂಗಳೂರಿನಲ್ಲಿ ₹ 8 ಲಕ್ಷ ವೆಚ್ಚವಾದರೆ, ಇಲ್ಲಿ ಈ ವೆಚ್ಚವು ₹ 1 ಲಕ್ಷ ದಾಟುವುದಿಲ್ಲ. ಐಸೊಟೋಪ್ ಸ್ಕ್ಯಾನ್‌ಗೆ ಬೆಂಗಳೂರಿನ ರೋಗಿಗೆ ₹ 30 ಸಾವಿರ ವೆಚ್ಚವಾಗುತ್ತದೆ. ಆದರೆ ನಮ್ಮ ಸಂಸ್ಥೆಯಲ್ಲಿ ಬಿಪಿಎಲ್ ಕಾರ್ಡ್ ಇಲ್ಲದವರಿಗೂ ₹ 9,000ಕ್ಕಿಂತ ಕಡಿಮೆ ಇರುತ್ತದೆ. ಬಿಪಿಎಲ್ ಕಾರ್ಡ್‌ದಾರರು ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಅಡಿಯಲ್ಲಿ ನೋಂದಾಯಿಸಿಕೊಂಡವರಿಗೆ ಚಿಕಿತ್ಸೆ ಉಚಿತವಾಗಿರುತ್ತದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಆಂಕಾಲಜಿ ವಿಭಾಗದ ಮುಖ್ಯಸ್ಥ ರಾದ ಅಚ್ಯುತ್ ನಾಯಕ್, ರಾಜೇಶ್ ಕೃಷ್ಣ, ರೋಹನ್ ಶೆಟ್ಟಿ ಹಾಗೂ ಅರುಣ್ ಎಸ್ ನಾಥ್ ಇದ್ದರು.