ಮಂಗಳೂರು: ಇಲ್ಲಿನ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಶುಕ್ರವಾರ ಘರ್ಷಣೆ ನಡೆದಿದೆ. ‘ಕಾಲೇಜಿನಲ್ಲಿ ತರಗತಿಯೊಂದರಲ್ಲಿ ಇತ್ತೀಚೆಗೆ ಸಾವರ್ಕರ್ ಭಾವಚಿತ್ರ ಅಳವಡಿಸಿದ್ದ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದ್ದನ್ನು ಪ್ರಶ್ನಿಸಿ ನಮ್ಮ ಮೇಲೆ ಹಲ್ಲೆ ನಡೆಸಲಾಗಿದೆ’ ಎಂದು ಆರೋಪಿಸಿ ಕಾಲೇಜಿನ ಪ್ರಥಮ ಬಿ.ಎ. ವಿದ್ಯಾರ್ಥಿ ಮಹಮ್ಮದ್ ಮರ್ಜೂಕ್, ತೃತೀಯ ಬಿ.ಎಸ್ಸಿಯ ಮಹಮ್ಮದ್ ಇರ್ಫಾಜ್ ಹಾಗೂ ದ್ವಿತೀಯ ಬಿ.ಎ. ವಿದ್ಯಾರ್ಥಿ ಅಬೂಬಕ್ಕರ್ ಸಿದ್ಧಿಕ್ ದೂರು ನೀಡಿದ್ದು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಹಲ್ಲೆ ನಡೆಸಿದವರು ಎಬಿವಿಪಿ ಸಂಘಟನೆಯವರು’ ಎಂದು ದೂರುದಾರರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಜನ್ ಶೆಟ್ಟಿ ಹಾಗೂ ಸ್ವಸ್ತಿಕ್ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಇವರು ಎಬಿವಿಪಿ ಸಂಘಟನೆಯವರು ಎನ್ನಲಾಗಿದೆ. ‘ಕ್ಯಾಂಟೀನ್ ಬಳಿ ತೆರಳುತ್ತಿದ್ದಾಗ ಪ್ರಜನ್ ಅವರನ್ನು ದೂಡಿ ಸ್ವಸ್ತಿಕ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ’ ಎಂದು ಎಬಿವಿಪಿ ಮುಖಂಡರು ದೂರಿದ್ದಾರೆ. ‘ಘರ್ಷಣೆ ಸಂಬಂಧ ಎರಡು ದೂರುಗಳು ಬಂದಿವೆ. ಒಂದು ಗುಂಪಿನ ಮೂವರು ವಿದ್ಯಾರ್ಥಿಗಳು ಹಲ್ಲೆಯಿಂದ ಗಾಯಗೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಇನ್ನೊಂದು ಗುಂಪಿನ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿರುವುದಾಗಿ ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಹಲ್ಲೆಗೆ ಒಳಗಾದವರು ಯಾವ ಸಂಘಟನೆಗೆ ಸೇರಿದವರು ಎಂದು ತಿಳಿಯದು’ ಎಂದು ಪಾಂಡೇಶ್ವರ ಠಾಣೆಯ ಪೊಲೀಸರು ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಹಾಗೂ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್ಎಸ್‌ಯುಐ) ಹಾಗೂ ಯುವ ಕಾಂಗ್ರೆಸ್ ಸಂಘಟನೆಗಳು ಕಾಲೇಜಿನ ಪ್ರವೇಶ ದ್ವಾರದ ಬಳಿ ಸಂಜೆ ಪ್ರತಿಭಟನೆ ನಡೆಸಿದವು. ‘ಮುಸ್ಲಿಂ ಸಮುದಾಯವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಲಾಗಿದೆ. ಇದಕ್ಕೂ ಮುನ್ನ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗದಂತೆ ನಿರ್ಬಂಧ ವಿಧಿಸಲಾಯಿತು. ಮುಸ್ಲಿಂ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ದೂರ ಇಡುವ ಹುನ್ನಾರ ನಡೆಯುತ್ತಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.
‘ಸಾವರ್ಕರ್ ಭಾವಚಿತ್ರವನ್ನು ತರಗತಿಯಲ್ಲಿ ಅಕ್ರಮವಾಗಿ ಅಳವಡಿಸಿದ ವಿದ್ಯಾರ್ಥಿಗಳ ವಿರುದ್ಧ ಕಾಲೇಜಿನ ಪ್ರಾಂಶುಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ. ಅದರ ಬದಲು ಈ ಬಗ್ಗೆ ದೂರು ನೀಡುವಾಗ ‘ಸಾವರ್ಕರ್ ಒಬ್ಬ ದೇಶದ್ರೋಹಿ’ ಎಂಬ ಪದ ಬಳಸಿದ್ದಕ್ಕೆ ಕೆಲವು ವಿದ್ಯಾರ್ಥಿಗಳಿಂದ ಪ್ರಾಂಶುಪಾಲರು ಕ್ಷಮಾಪಣೆ ಪತ್ರ ಬರೆಸಿಕೊಂಡಿದ್ದಾರೆ. ಈ ರೀತಿ ತಾರತಮ್ಯದಿಂದ ವರ್ತಿಸುವ ಪ್ರಾಂಶುಪಾಲರನ್ನು ಅಮಾನತು ಮಾಡಬೇಕು. ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವವರನ್ನು ಬಂಧಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ‘ಎಬಿವಿಪಿ ಗೂಂಡಾಗಳೇ ನಿಮಗಿದೋ ಎಚ್ಚರಿಕೆ. ವಿದ್ಯೆ ಕಲಿಸುವ ಪವಿತ್ರ ಸ್ಥಳದಲ್ಲಿ ಬ್ರಿಟೀಷರ ಬೂಟು ನೆಕ್ಕಿದ ಹೇಡಿ ಸಾವರ್ಕರ್ ಭಾವಚಿತ್ರ ಅಳವಡಿಸಲು ಯಾವತ್ತೂ ಬಿಡುವುದಿಲ್ಲ’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
Discover more from Coastal Times Kannada
Subscribe to get the latest posts sent to your email.
Discussion about this post