ಉಳ್ಳಾಲ: ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಅಂತರ ರಾಜ್ಯ ಸಂಚಾರವನ್ನು ಯಾವುದೇ ಕಾರಣಕ್ಕೂ ನಿರ್ಬಂಧಿಸುವಂತಿಲ್ಲ ಎಂದು ಸೂಚನೆ ನೀಡಿದ್ದರೂ, ಕರ್ನಾಟಕದ ಬಸವರಾಜ ಬೊಮ್ಮಾಯಿ ಸರಕಾರ ಕೋವಿಡ್ ಹೆಸರಲ್ಲಿ ಗಡಿ ಬಂದ್ ಮಾಡಿ ಬಿಕ್ಕಟ್ಟು ಸೃಷ್ಟಿಸಿದೆ ಎಂದು ಕಾಂಗ್ರೆಸ್ ಮುಖಂಡ ಹರ್ಷಾದ್ ವರ್ಕಾಡಿ ಆರೋಪಿಸಿದರು.
ಕೋವಿಡ್ ಕಾರಣಕ್ಕೆ ಕೇರಳದವರಿಗೆ ಸಂಚಾರ ನಿರ್ಬಂಧಿಸಿರುವ ಕರ್ನಾಟಕ ಸರ್ಕಾರದ ಕ್ರಮವನ್ನು ಖಂಡಿಸಿ ಗಡಿಭಾಗ ತಲಪಾಡಿಯಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಕರ್ನಾಟಕದ ಗಡಿಭಾಗ ಬಂದ್ ಮಾಡಿರುವ ಕ್ರಮ ಜನಸಾಮಾನ್ಯರನ್ನು ಬೀದಿಗೆ ತಳ್ಳಿದೆ. ಈ ಬಗ್ಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಧ್ಯ ಪ್ರವೇಶ ಮಾಡಿ, ಇತ್ಯರ್ಥ ಪಡಿಸಬೇಕಾಗಿದೆ. ಎರಡು ಡೋಸ್ ಲಸಿಕೆ ಪಡೆದವರಿಗೆ ನಿರ್ಬಂಧ ವಿಧಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ’ ಎಂದರು.
ಕರ್ನಾಟಕ ಮತ್ತು ಕೇರಳದ ಉಭಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಯುಡಿವೈಎಫ್ ಮಂಜೇಶ್ವರ ಪಂಚಾಯಿತಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಪ್ರತಿಭಟನಕಾರರು ಕೋವಿಡ್ ಲಸಿಕೆ ತಡೆ ದಾಖಲೆ ಪ್ರತಿಯನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕೋವಿಡ್ ಲಸಿಕೆ ಪಡೆದರೂ ಅದಕ್ಕೆ ಬೆಲೆಯಿಲ್ಲ ಎಂದಾದರೆ ಈ ಲಸಿಕೆ ಯಾಕೆ ಇರಬೇಕು? ಈ ವರದಿ ಯಾಕೆ ಬೇಕು ಎಂದು ಪ್ರಶ್ನೆ ಮಾಡಿದರು.
ಕೆಎಂಸಿಸಿ ಮುಖಂಡ ಬಾಬಾ ಉದ್ಯಾವರ, ಮುಸ್ಲಿಂ ಲೀಗ್ ಮಂಜೇಶ್ವರ ಪಂಚಾಯಿತಿ ಸಮಿತಿ ಅಧ್ಯಕ್ಷ ಸೈಫುಲ್ಲಾ ತಂಙಳ್, ಯೂತ್ ಕಾಂಗ್ರೆಸ್ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಇರ್ಷಾದ್ ಮಂಜೇಶ್ವರ, ಮಂಜೇಶ್ವರ ಗ್ರಾಮ ಪಂಚಾಯಿತಿ ಸದಸ್ಯರಾದ ಮುಸ್ತಫಾ ಉದ್ಯಾವರ, ಪ್ರಮುಖರಾದ ಸಿದ್ದೀಕ್ ಮಂಜೇಶ್ವರ, ಡೆರಿಕ್ ಮೊಂತೇರೊ, ಹನೀಫ್ ಪಡಿನ್ಯಾರ್, ಎಂ.ಪಿ ಬದ್ರುದ್ದೀನ್ ತುಮಿನಾಡ್ ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post