ಬಂಟ್ವಾಳ: ನಗರ ಠಾಣೆ ವ್ಯಾಪ್ತಿಯ ಬಾಲಕಿಯೊಬ್ಬಳನ್ನು ಶುಕ್ರವಾರ ಪುಸಲಾಯಿಸಿ ಕರೆದೊಯ್ದು ಮಂಗಳೂರಿನ ಲಾಡ್ಜ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಂಧಿಸಲಾದ ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಾಪು ನಿವಾಸಿ ಶರತ್ ಶೆಟ್ಟಿ, ಈತನ ಸಂಬಂಧಿ ಮಾರುತಿ ಮಂಜುನಾಥ್, ಲಾಡ್ಜ್‌ನ ಸತೀಶ್ ಹಾಗು ಇದಾಯತ್ತುಲ್ಲ ಬಂಧಿತರು. ಸತೀಶ್ ಶರತ್ ಶೆಟ್ಟಿಗೆ ಪರಿಚಿತನಾಗಿದ್ದು, ಲಾಡ್ಜ್ ವ್ಯವಸ್ಥೆ ಮಾಡಿ ಕೊಟ್ಟಿದ್ದ. ಬಳಿಕ ಆತನೂ ಲೈಂಗಿಕ ಶೋಷಣೆ ನಡೆಸಿದ್ದ. ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಸಂತ್ರಸ್ತೆಗೆ ಪರಿಚಿತರಾಗಿದ್ದರು.
ಬೇರೆ ಬೇರೆ ಪ್ರದೇಶಗಳಲ್ಲಿದ್ದ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಮಂಗಳೂರಿನಲ್ಲಿ ಈ ಕೃತ್ಯ ನಡೆದದ್ದು ಕಂಡುಬಂದಿದೆ. ಆಕೆ ಬಸ್‌ನಲ್ಲಿ ಪ್ರಯಾಣಿಸಿದ್ದಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಬಂಟ್ವಾಳದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಘಟನೆಯ ಮಾಹಿತಿ ತಿಳಿದ ತಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ ಅಡಿಷನಲ್ ಎಸ್ಪಿ ಡಾ.ಶಿವಕುಮಾರ್ ಮಾರ್ಗದರ್ಶನದಲ್ಲಿ, ಎಎಸ್ಪಿ ಶಿವಾಂಶು ರಜಪೂತ್ ನೇತೃತ್ವದ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್, ಬಂಟ್ವಾಳ ಎಸ್ಸೈ ಅವಿನಾಶ್ ಗೌಡ ನೇತೃತ್ವದ ಪೊಲೀಸರ ತಂಡ ಗ್ರಾಮಾಂತರ ಎಸ್ಸೈ ಪ್ರಸನ್ನ ಅವರ ತಂಡದಲ್ಲಿ ಎಎಸ್‌ಐ ಗಿರೀಶ್, ಹೆಚ್‌ಸಿ ಲೋಕೇಶ್, ಕೃಷ್ಣ ಕುಲಾಲ್, ಸುಜು ಹಾಗೂ ಎಎಸ್ಪಿ ವಿಶೇಷ ತಂಡದ ಉದಯ ರೈ, ಪ್ರವೀಣ್, ಪ್ರಶಾಂತ್, ವಿವೇಕ್ ಕುಮಾರ್ ಹಾಗು ಚಾಲಕ ವಿಜಯ್ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು. ಅತ್ಯಂತ ಕ್ಲಿಷ್ಟಕರ ಪ್ರಕರಣವನ್ನು 24 ಗಂಟೆಯೊಳಗೆ ಭೇದಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಅಶ್ಲೀಲ ಚಾಟಿಂಗ್ ಘಟನೆಗೆ ಕಾರಣ: ಸಂತ್ರಸ್ತೆ ಶರತ್ ಶೆಟ್ಟಿಗೆ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದಳು. ಈತ ತನ್ನ ಸಂಬಂಧಿ ಮಾರುತಿ ಮಂಜುನಾಥ್‌ಗೆ ಆಕೆಯನ್ನು ಪರಿಚಯ ಮಾಡಿಕೊಟ್ಟಿದ್ದ. ಇವರಿಬ್ಬರು ಆಕೆಯೊಂದಿಗೆ ವಾಟ್ಸಾೃಪ್‌ನಲ್ಲಿ ಅಶ್ಲೀಲವಾಗಿ ಚಾಟಿಂಗ್ ಮಾಡುತ್ತಿದ್ದರು. ಆಕೆ ಪ್ರತಿರೋಧ ನೀಡದೆ ಅವರೊಂದಿಗೆ ಪೂರಕವಾಗಿ ಚಾಟಿಂಗ್ ಮಾಡುತ್ತಿದ್ದುದನ್ನೇ ಬಂಡವಾಳವಾಗಿಸಿದ ಆರೋಪಿಗಳು ಮಂಗಳೂರಿನ ಲಾಡ್ಜ್‌ಗೆ ಕರೆಸಿ ಸಾಮೂಹಿಕ ಅತ್ಯಾಚಾರ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ.
Discover more from Coastal Times Kannada
Subscribe to get the latest posts sent to your email.
Discussion about this post