ಉಳ್ಳಾಲ: ಅಂಗಡಿಗೆ ಸ್ವೀಟ್ ಖರೀದಿಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕೊಣಾಜೆ ಪೊಲೀಸರು ಅಂಗಡಿ ಮಾಲೀಕನನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಕೊಣಾಜೆ ಸೂಪರ್ ಸ್ಟೋರ್ ಮತ್ತು ಸ್ವೀಟ್ಸ್ ಮಾಲೀಕನ ಪುತ್ರ ಉಸ್ಮಾನ್(35) ಬಂಧಿತ ಆರೋಪಿ. ಭಾನುವಾರ ಸಂಜೆ 13 ವರ್ಷದ ಬಾಲಕಿ ಖರೀದಿಗೆಂದು ಅಂಗಡಿಗೆ ಬಂದಿದ್ದು, ಈ ಸಂದರ್ಭ ಆರೋಪಿ ಆಕೆಯನ್ನು ಪುಸಲಾಯಿಸಿ ಒಳಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಇದರಿಂದ ಬೆದರಿದ ಬಾಲಕಿ ಅಲ್ಲಿಂದ ಓಡಿ ತಪ್ಪಿಸಿಕೊಂಡು ಬಂದು ತಾಯಿಯಲ್ಲಿ ವಿಚಾರ ತಿಳಿಸಿದ್ದಾಳೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರ ಬಹಿರಂಗಗೊಳ್ಳುತ್ತಲೇ ಎರಡು ಕೋಮಿನ ಜನರು ಠಾಣೆಯೆದುರು ಸೇರಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ಉಂಟಾಯಿತು.