ಉಳ್ಳಾಲ: ಕೇಂದ್ರ ಸರ್ಕಾರ ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡುತ್ತಿದೆ. ಕಾರ್ಪೊರೇಟ್ ಕಂಪನಿಗಳು ದೇಶವನ್ನೇ ಅವರ ಸ್ವತ್ತನ್ನಾಗಿ ಮಾಡಿಕೊಳ್ಳುತ್ತವೆ. ಇದನ್ನು ವಿರೋಧಿಸಬೇಕಾಗಿದೆ ಎಂದು ರೈತ ಸಂಘದ ಮುಖಂಡ ಕೃಷ್ಣಪ್ಪ ಸಾಲ್ಯಾನ್ ಹೇಳಿದರು.
‘ದೇಶದ ಸಂಪತ್ತು ಲೂಟಿ ಮಾಡುತ್ತಿರುವ ಕಾರ್ಪೊರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ’ ಎಂಬ ಧ್ಯೇಯದೊಂದಿಗೆ ರೈತ, ಕಾರ್ಮಿಕ ವರ್ಗದಿಂದ ಮಂಗಳವಾರ ಇಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸಿಐಟಿಯು ಜಿಲ್ಲಾ ಮುಖಂಡ ಜಯಂತ್ ನಾಯಕ್ ಮಾತನಾಡಿ, ‘ಕ್ವಿಟ್ ಇಂಡಿಯಾ ದೇಶವ್ಯಾಪಿ ಪ್ರತಿಭಟನೆಗೆ ಚಾಲನೆ ನೀಡಲಾಗಿದೆ. ಈಸ್ಟ್ ಇಂಡಿಯಾ ಕಂಪನಿ ರೈತರ ಮೇಲೆ, ಕಾರ್ಮಿಕರ ಮೇಲೆ ಅಧಿಕಾರ ಚಲಾಯಿಸಿ ಸ್ವಾತಂತ್ರ್ಯ ಕಳೆದುಕೊಂಡಿದ್ದೆವು. ಈಗ ಮೋದಿ ಸರ್ಕಾರ ಕಾರ್ಪೊರೇಟ್ ಕಂಪನಿಗಳನ್ನು ಆಹ್ವಾನಿಸಿ, ಹೂಡಿಕೆ ಮಾಡಿ ಎನ್ನುತ್ತಿದೆ. ಮತ್ತೆ ಸ್ವಾತಂತ್ರ್ಯ ಕಸಿಯಲು ಹೊರಟಿದೆ’ ಎಂದರು.
ಸಿಐಟಿಯು ಉಳ್ಳಾಲ ವಲಯದ ಅಧ್ಯಕ್ಷ ಪದ್ಮಾವತಿ ಎಸ್ ಶೆಟ್ಟಿ, ಜನವಾದಿ ಮಹಿಳಾ ಸಂಘದ ಸಂಚಾಲಕಿ ವಿಲಾಸಿನಿ ತೊಕ್ಕೊಟ್ಟು, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಜನಾರ್ದನ ಕುತ್ತಾರು, ರೈತ ಸಂಘದ ಮುಖಂಡ ಶೇಖರ್ ಕುಂದರ್, ವಲಯ ಕಾರ್ಯದರ್ಶಿ ಜಯಂತ್ ಅಂಬ್ಲಮೊಗರು, ರೋಹಿದಾಸ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Discussion about this post