ಮಂಗಳೂರು: ನೀಟ್ ವಿಚಾರದಲ್ಲಿ ಇತ್ತೀಚೆಗಷ್ಟೇ ಕೇರಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಅಯಿಜಾ ಆರ್ ಮಹೇಶ್ (19) ಎಂಬಾಕೆಯ ಸಹೋದರ ಅರ್ಜುನ್ ಮಹೇಶ್ (24) ಮಂಗಳೂರಿನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಂಗಿಯ ಸಾವಿನಿಂದ ಮನನೊಂದು ಸೋಮವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಾಸರಗೋಡಿನ ಅರ್ಜುನ್ ಎಂಬಾತ ನಗರದ ಹೋಟೆಲ್ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಈತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೂಲತಃ ಕಾಸರಗೋಡು ಜಿಲ್ಲೆಯ ಮುಕ್ಕೂಡು ನಿವಾಸಿಯಾಗಿರುವ ಅರ್ಜುನ್, ದುಬೈನಲ್ಲಿ ಆಟೋಮೊಬೈಲ್ ಎಂಜಿನಿಯರ್ ಆಗಿ ಉದ್ಯೋಗದಲ್ಲಿದ್ದರು. ಬಜ್ಪೆ ಠಾಣೆ ವ್ಯಾಪ್ತಿಯ ಮರವೂರಿನಲ್ಲಿರುವ ಹೋಟೆಲ್ವೊಂದರಲ್ಲಿ ತಂಗಿದ್ದರು. ಹೋಟೆಲ್ ಕೊಠಡಿಯಲ್ಲಿ ಅವರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಡೆತ್ ನೋಟ್ ಪತ್ತೆ: ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಆದರೆ, ಸಣ್ಣ ಚೀಟಿಯೊಂದರಲ್ಲಿ “ಅಮ್ಮಾ, ಐ ಆಮ್ ಸಾರಿ” (Amma, I’m sorry) ಎಂದು ಬರೆದು, ತಮ್ಮ ಇಬ್ಬರು ಆಪ್ತ ಸ್ನೇಹಿತರಿಗೆ ಮಾಹಿತಿ ನೀಡುವಂತೆ ನಮೂದಿಸಿದ್ದಾರೆ ಎಂದು ಕಮಿಷನರ್ ರೆಡ್ಡಿ ತಿಳಿಸಿದ್ದಾರೆ.
ಘಟನೆಗೆ ನಿಖರ ಕಾರಣ ಏನೆಂಬುದು ಇನ್ನಷ್ಟೇ ತಿಳಿದುಬರಬೇಕಿದ್ದು, ಬಜ್ಪೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post