ಮಂಗಳೂರು, ಸೆ.24: ಪಾಂಡೇಶ್ವರದ ಶ್ರೀನಿವಾಸ ಪದವಿ ಕಾಲೇಜಿನಲ್ಲಿ ಸೀನಿಯರ್ ವಿದ್ಯಾರ್ಥಿಗಳು ಇಬ್ಬರು ಕಿರಿಯ ವಿದ್ಯಾರ್ಥಿಗಳನ್ನು ಮನೆಯೊಂದರಲ್ಲಿ ಕೂಡಿಹಾಕಿ ಚಡ್ಡಿಯಲ್ಲಿ ನಿಲ್ಲಿಸಿ ಚಿತ್ರಹಿಂಸೆ ನೀಡಿರುವ ಘಟನೆ ನಡೆದಿದ್ದು, ಪಾಂಡೇಶ್ವರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಸೀದ್ ಅಮೀರ್, ಆದಿಲ್, ಅಶ್ರಾಕ್, ಅನೀಶ್, ಉವೈಸ್, ರೋಹನ್ ರಮೇಶ್, ಆದಿಲ್, ರೆಹಾನ್ ಎಂ.ಪಿ, ಶಿನಾಸ್ ಎಂಬವರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೇಸು ದಾಖಲಾದ ಬೆನ್ನಲ್ಲೇ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆ.19ರಂದು ಶ್ರೀನಿವಾಸ ಕಾಲೇಜಿನ ಬಿಬಿಎ ಪದವಿಯ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತ ಮಹಮ್ಮದ್ ಅಲ್ಫಾಜ್ ಜೊತೆಗೆ ಕಾಲೇಜು ಬಳಿಯ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಸೀನಿಯರ್ ವಿದ್ಯಾರ್ಥಿಗಳ ಗುಂಪೊಂದು ತಡೆದು ಬೈಕಿನಲ್ಲಿ ಕೂರಿಸಿಕೊಂಡು ಮನೆಯೊಂದಕ್ಕೆ ಕರೆದೊಯ್ದು ಅಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಇವರ ಬಟ್ಟೆಯನ್ನು ಬಿಚ್ಚಿಸಿ ನಿಂತಿದ್ದು ಬೊಬ್ಬೆ ಹಾಕಿದಾಗ ಬಾಯಿಗೆ ಬಟ್ಟೆಯನ್ನು ತುರುಕಿದ್ದಾರೆ. ಕೈಯಿಂದ ಥಳಿಸಿದ್ದಲ್ಲದೆ, ರೆಹಾನ್ ಎಂಬಾತ ಕಬ್ಬಿಣದ ಪಂಚ್ ನಿಂದ ಹೊಡೆಯಲು ಮುಂದಾಗಿದ್ದಾನೆ.
ಇದೇ ವೇಳೆ, ನಾಶಿದ್ ಅಮೀರ್ ತನ್ನ ಬೆಲ್ಟ್ ನಿಂದ ಮತ್ತು ಆದಿಲ್ ಹ್ಯಾಂಗರ್ ನಿಂದ ಹಲ್ಲೆ ನಡೆಸಿದ್ದಾನೆ. ಇಬ್ಬರ ಮೇಲೂ ಆರೋಪಿಗಳು ಸೇರಿ ಹಲ್ಲೆ ನಡೆಸಿದ್ದು ಈ ವೇಳೆ ಅರ್ಷಕ್ ಎನ್ನುವಾತ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾನೆ. ಕುಡಿಯಲು ನೀರು ಕೇಳಿದಾಗ ರೋಹನ್ ರಮೇಶ್ ಎಂಬಾತ ಕಲುಷಿತ ನೀರನ್ನು ತಂದುಕೊಟ್ಟಿದ್ದು ಕುಡಿಯದೇ ಇದ್ದಾಗ ಮೈಗೆ ಚೆಲ್ಲಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಅಥವಾ ಯಾರಿಗಾದರೂ ಹೇಳಿದರೆ ಕಾಲೇಜಿನಲ್ಲೇ ತುಂಡು ತುಂಡಾಗಿ ಕತ್ತರಿಸಿ ಹಾಕುತ್ತೇವೆಂದು ಬೆದರಿಕೆ ಹಾಕಿದ್ದಾರೆ. ಇದರ ಬಗ್ಗೆ ಮನೆಯವರಿಗೆ ತಿಳಿಸಿದ್ದು ಅವರ ಸಲಹೆಯಂತೆ ದೂರು ನೀಡಿರುವುದಾಗಿ ಸಂತ್ರಸ್ತರು ಪೊಲೀಸರಿಗೆ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post