ಮಂಗಳೂರು, ಸೆ.10; ಅಡಿಕೆ ಮಾರು ಕಟ್ಟೆಯಲ್ಲಿನ ಏರಿಳಿತ ಹಾಗೂ ಕೊಕ್ಕೊ ವಲಯದಲ್ಲಿನ ಸವಾಲಿನ ಪರಿಸ್ಥಿತಿ ಗಳ ನಡುವೆಯೂ,( ಸೆಂಟ್ರಲ್ ಅರೆಕಾನಟ್ ಅಂಡ್ ಕೊಕ್ಕೊ ಮಾರ್ಕೆಟಿಂಗ್ ಅಂಡ್ ಪ್ರೊಸೆಸ್ಸಿಂಗ್ ಕೊಅಪರೇಟಿವ್ ಲಿಮಿಟೆಡ್ ) ಕ್ಯಾಂಪ್ಕೊ ಲಿ. ಸಂಸ್ಥೆಯು 2025-26ನೇ ಸಾಲಿನಲ್ಲಿ 3,735 ಕೋಟಿ ರೂ. ಒಟ್ಟು ದಾಖಲೆಯ ವ್ಯವಹಾರ ವಹಿವಾಟು ಮತ್ತು 49.62 ಕೋಟಿ ರೂ. ತೆರಿಗೆಪೂರ್ವ ಲಾಭ ದಾಖಲಿಸಿದೆ. 2025-26ನೇ ಸಾಲಿಗೆ ಸದಸ್ಯರಿಗೆ ಶೇ. 14ರಷ್ಟು ಡಿವಿಡೆಂಡ್ ನೀಡಲು ನಿರ್ದೇಶಕ ಮಂಡಳಿ ಶಿಫಾರಸು ಮಾಡಿದೆ ಎಂದು ಅಧ್ಯಕ್ಷ ಸತೀಶ್ ಚಂದ್ರ ಎಸ್ ಆರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನಿರಂತರ ಖರೀದಿ ಹಾಗೂ ಮಾರಾಟ ಕಾರ್ಯಾಚರಣೆ, ಸದಸ್ಯರಿಗೆ ಪೂರ್ಣ ಬೆಂಬಲ, ವ್ಯವಹಾರ ಚಟುವಟಿಕೆಗಳ ವೈವಿಧ್ಯೀಕರಣ, ಡಿಜಿಟಲ್ ಉಪಕ್ರಮಗಳು ಹಾಗೂ ಮೂಲಸೌಕರ್ಯ ಮತ್ತು ಮೌಲ್ಯವರ್ಧನೆಯಲ್ಲಿನ ನಿರಂತರ ಹೂಡಿಕೆಗಳೇ ಈ ಸಾಧನೆಗೆ ಕಾರಣ ಎಂದು ಅವರು ತಿಳಿಸಿದ್ದಾರೆ.
ಕಳೆದ ಆರ್ಥಿಕ ವರ್ಷದಲ್ಲಿ ಕ್ಯಾಂಪ್ಕೊ 2,924.32 ಕೋಟಿ ರೂ. ಮೌಲ್ಯದ 58,742.76 ಮೆ.ಟನ್ ಅಡಿಕೆ ಖರೀದಿಸಿದ್ದು, 2,985.19 ಕೋಟಿ ರೂ. ಮೌಲ್ಯದ 59,088.64 ಮೆ.ಟನ್ ಅಡಿಕೆ ಮಾರಾಟ ಮಾಡಿದೆ. ದೇಶೀಯ ಮಾರುಕಟ್ಟೆಗೆ ಹೆಚ್ಚುತ್ತಿರುವ ಆಮದು ಅಡಿಕೆಯ ಒಳಹರಿವು, ಅತ್ಯಂತ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ.
ಆದ್ದರಿಂದ ಅಡಿಕೆ ಆಮದಿನ ಮೇಲೆ ಕಟ್ಟುನಿಟ್ಟಿನ ನಿಗಾ ಸೂಕ್ತ ಕ್ರಮ ಕೈಗೊಳ್ಳುವಂತೆ ಕ್ಯಾಂಪ್ಕೊ ಸರಕಾರವನ್ನು ನಿರಂತರವಾಗಿ ಒತ್ತಾಯಿಸುತ್ತಿದೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಭೇಟಿಯ ವೇಳೆ ಈ ವಿಷಯವನ್ನು ಮಾನ್ಯ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ಗಮನಕ್ಕೆ ತರಲಾಗಿದೆ. ಕ್ಯಾಂಪ್ಕೊ, ದೇಶೀಯ ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಪರಿಣಾಮಕಾರಿ ಮತ್ತು ಸಮನ್ವಯದ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಕೋರಿದೆ.
ಉತ್ತರ ಪ್ರದೇಶದ ಮಂಡಿ ತೆರಿಗೆ ವಿಷಯ ಪ್ರಸ್ತಾಪ : ಉತ್ತರ ಪ್ರದೇಶದಲ್ಲಿ ಅಡಿಕೆ ವಹಿವಾಟಿನ ಮೇಲೆ ವಿಧಿಸಲಾಗುತ್ತಿರುವ ಮಂಡಿ ತೆರಿಗೆಯ ವಿಷಯವನ್ನೂ ಕ್ಯಾಂಪ್ಕೊ ಪ್ರಸ್ತಾಪಿಸಿದೆ. ಈ ತೆರಿಗೆಯು ಅಂತರ-ರಾಜ್ಯ ಮಾರಾಟದ ವೆಚ್ಚವನ್ನು ಹೆಚ್ಚಿಸುತ್ತಿದ್ದು, ಸಂಸ್ಥೆಯ ಕಾರ್ಯಾಚರಣೆಯ ಸ್ಪರ್ಧಾತ್ಮಕತೆಯ ಮೇಲೆ ಪರಿಣಾಮ ಬೀರುತ್ತಿದೆ.
“ಒಂದು ರಾಷ್ಟ್ರ, ಒಂದು ತೆರಿಗೆ” ತತ್ವದ ಹಿನ್ನೆಲೆಯಲ್ಲಿ ಹಾಗೂ ಕೃಷಿ ಉತ್ಪನ್ನಗಳ ಅಂತರ-ರಾಜ್ಯ ಸಾಗಾಟ ಮತ್ತು ಮಾರಾಟದ ಮೇಲೆ ಹೆಚ್ಚುವರಿ ತೆರಿಗೆ-ಸುಂಕದ ಹೊರೆ ಬೀಳಬಾರದೆಂಬ ದೃಷ್ಟಿಯಿಂದ ಈ ವಿಷಯವನ್ನು ಮಾನ್ಯ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ತರಲಾಗಿದೆ. ಇದನ್ನು ರಾಜ್ಯ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಕಳುಹಿಸಲಾಗಿದೆ.
ಕ್ಯಾಂಪ್ಕೊ ಉತ್ತರ ಪ್ರದೇಶದ ಮಾನ್ಯ ಮುಖ್ಯಮಂತ್ರಿಗಳನ್ನೂ ಭೇಟಿ ಮಾಡಿ ರಾಜ್ಯ ಸರ್ಕಾರದ ಮುಂದೆ ವಿಷಯ ಮಂಡಿಸಿದೆ. ಚರ್ಚೆಯ ವೇಳೆ, ಕ್ಯಾಂಪ್ಕೊಗೆ ನಿರ್ದಿಷ್ಟ ವಿನಾಯಿತಿ ನೀಡಿದರೆ ಇತರ ಸಂಸ್ಥೆಗಳಿಂದಲೂ ಇದೇ ಮಾದರಿಯ ಬೇಡಿಕೆಗಳಿಗೆ ಪೂರ್ವನಿದರ್ಶನ ಸೃಷ್ಟಿಯಾಗಬಹುದೆಂದು ರಾಜ್ಯದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದು, ವಿಷಯ ಇನ್ನೂ ಇತ್ಯರ್ಥವಾಗಿಲ್ಲ. ಇಂತಹ ಸುಂಕಗಳ ವಿಚಾರದಲ್ಲಿ ತರ್ಕಬದ್ಧ ಹಾಗೂ ಏಕರೂಪದ ಧೋರಣೆ ಇದ್ದರೆ ಮಾತ್ರ ಕೃಷಿ ಉತ್ಪನ್ನಗಳ ಸುಗಮ ಅಂತರ-ರಾಜ್ಯ ಸಾಗಾಟ ಸಾಧ್ಯವಾಗಿ, ಅನಗತ್ಯ ವಹಿವಾಟು ವೆಚ್ಚ ಕಡಿಮೆಯಾಗಿ, ಅಂತಿಮವಾಗಿ ರೈತರ ಮತ್ತು ಗ್ರಾಹಕರ ಹಿತ ಕಾಪಾಡಲಾಗುತ್ತದೆ. ಎಂಬ ನಂಬಿಕೆಯೊಂದಿಗೆ ಕ್ಯಾಂಪ್ಕೊ, ಸಂಬಂಧಪಟ್ಟ ಪ್ರಾಧಿಕಾರಗಳೊಂದಿಗೆ ಈ ವಿಷಯದ ಚರ್ಚೆಯನ್ನು ಮುಂದುವರಿಸಿದೆ.
ದೇಶೀಯ ಅಡಿಕೆ ಬೆಳೆಗಾರರಿಗೆ ನ್ಯಾಯಯುತ, ಪಾರದರ್ಶಕ ಮತ್ತು ಸ್ಥಿರ ಮಾರುಕಟ್ಟೆ ದೊರೆಯುವಂತೆ ಮಾಡಲು ಅಡಿಕೆ ವಲಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಂದೆ ಮಂಡಿಸಿ
ಸೂಕ್ತ ನೀತಿ ಜಾರಿಗೊಳಿಸಲು ಒತ್ತಾಯಿಸುವ ಕಾರ್ಯವನ್ನು ಸಂಸ್ಥೆ ಮುಂದುವರಿಸಿದೆ.
ಕೊಕ್ಕೊ ಮತ್ತು ಚಾಕೊಲೇಟ್ ವಿಭಾಗದಲ್ಲಿ ಉತ್ತಮ ಸಾಧನೆ : ಆರ್ಥಿಕ ವರ್ಷದಲ್ಲಿ ಕ್ಯಾಂಪ್ಕೊ ರೂ. 27.96 ಕೋಟಿ ಮೌಲ್ಯದ 2,351.18 ಮೆ.ಟನ್ ಹಸಿ ಕೊಕ್ಕೊ ಬೀಜ ಮತ್ತು ರೂ. 85.52 ಕೋಟಿ ಮೌಲ್ಯದ 4,021.85 ಮೆ.ಟನ್ ಒಣ ಬೀಜ ಖರೀದಿಸಿದೆ. ಚಾಕೊಲೇಟ್ ಕಾರ್ಯಾಚರಣೆಯಲ್ಲಿ ಒಟ್ಟು 5,224.64 ಮೆ.ಟನ್ ಒಣ ಬೀಜ ಬಳಕೆಯಾಗಿದೆ. ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆಯು ಆರ್ಥಿಕ ವರ್ಷ ದಲ್ಲಿ 12,606.40 ಮೆ.ಟನ್ ಉತ್ಪಾದನೆ ಮಾಡಿದ್ದು, ಇದರಲ್ಲಿ ಕ್ಯಾಂಪ್ಕೊ ಸ್ವಂತ ಬ್ರಾಂಡ್ ಅಡಿಯಲ್ಲಿ 12,257.58 ಮೆ.ಟನ್ ಚಾಕೊಲೇಟ್ ಉತ್ಪನ್ನಗಳು, ಜಾಬ್-ವರ್ಕ್ ಅಡಿಯಲ್ಲಿ 258.40 ಮೆ.ಟನ್ ಹಾಗೂ 90.42 ಮೆ.ಟನ್ ತೆಂಗಿನ ಎಣ್ಣೆ ಸೇರಿವೆ.
488.65 ಕೋಟಿ ರೂ. ಮೌಲ್ಯದ ಕೊಕ್ಕೊ ಮತ್ತು ಚಾಕೊಲೇಟ್ ಉತ್ಪನ್ನಗಳು ಮಾರಾಟವಾಗಿದ್ದು, ಇದರಲ್ಲಿ ಸಿದ್ಧ/ಚಿಲ್ಲರೆ ಚಾಕೊಲೇಟ್ ವಿಭಾಗದಿಂದ 75.59 ಕೋಟಿ ರೂ., ಕೈಗಾರಿಕಾ ಚಾಕೊಲೇಟ್ ವಿಭಾಗದಿಂದ 384.91 ಕೋಟಿ ಮತ್ತು ರಫ್ತಿನಿಂದ 24.82 ಕೋಟಿ ಸೇರಿದೆ. ತೆಂಗಿನ ಎಣ್ಣೆ ಮಾರಾಟದಿಂದ 3.33 ಕೋಟಿ ಹಾಗೂ ಜಾಬ್-ವರ್ಕ್ ಸಂಸ್ಕರಣಾ ಶುಲ್ಕದಿಂದ 1.25 ಕೋಟಿ ಆದಾಯ ಬಂದಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಭ್ಯವಿದ್ದು, ದೇಶೀಯ ಹಾಗೂ ಅಂತಾ ರಾಷ್ಟ್ರೀಯ ಪ್ರಯಾಣಿಕರಿಗೆ. ಕ್ಯಾಂಪ್ಕೊ ಬ್ರಾಂಡ್ ಪರಿಚಯವಾಗುತ್ತಿದೆ.ರೈಲ್ವೆ ಯಲ್ಲೂ ಕ್ಯಾಂಪ್ಕೋ ಉತ್ಪನ್ನಗಳನ್ನು ಪರಿಚಯಿಸುವ ಗುರಿ ಹೊಂದಲಾಗಿದೆ. ಚಾಕೊಲೇಟ್ ಉತ್ಪಾದನಾ ಮೂಲಸೌಕರ್ಯ ಬಲವರ್ಧನೆಗೂ ಸಂಸ್ಥೆ ಕ್ರಮ ಕೈಗೊಂಡಿದೆ.
ರಬ್ಬರ್ ಮತ್ತು ಕಾಳುಮೆಣಸು ವಿಭಾಗಗಳ ಕೊಡುಗೆ:- ಕ್ಯಾಂಪ್ಕೊ 32.41 ಕೋಟಿ ಮೌಲ್ಯದ 1,704.77 ಮೆ.ಟನ್ ರಬ್ಬರ್ ಖರೀದಿಸಿ, 33.67 ಕೋಟಿ ಮೌಲ್ಯದ 1,728.38 ಮೆ.ಟನ್ ಮಾರಾಟ ಮಾಡಿದೆ. ಜೊತೆಗೆ 113.22 ಕೋಟಿ ಮೌಲ್ಯದ 1,656.12 ಮೆ.ಟನ್ ಕಾಳುಮೆಣಸು ಖರೀದಿಸಿ, 134.27 ಕೋಟಿ ಮೌಲ್ಯದ 1,982.01 ಮೆ.ಟನ್ ಮಾರಾಟ ಮಾಡುವ ಮೂಲಕ ತೋಟಗಾರಿಕಾ ಬೆಳೆ ವಲಯದಲ್ಲಿ ತನ್ನ ಉಪಸ್ಥಿತಿಯನ್ನು ಬಲಪಡಿಸಿಕೊಂಡಿದೆ.
1.16 ಲಕ್ಷ ಕೊಕ್ಕೊ ಸಸಿಗಳ ವಿತರಣೆ ; ಕೊಕ್ಕೊ ಕೃಷಿಯನ್ನು ಬಲಪಡಿಸಿ ಗುಣಮಟ್ಟದ ಕೊಕ್ಕೊ ಗಿಡಗಳ ಪೂರೈಸುವ ಪ್ರಯತ್ನದ ಭಾಗವಾಗಿ, 2025-26ರಲ್ಲಿ ಕ್ಯಾಂಪ್ಕೊ 1,16,275 ಕೊಕ್ಕೊ ಸಸಿಗಳನ್ನು ಬೆಳೆಗಾರ-ಸದಸ್ಯರಿಗೆ ರಿಯಾಯಿತಿ ದರದಲ್ಲಿ ವಿತರಿಸಿದೆ.
2026-27ನೇ ಆರ್ಥಿಕ ವರ್ಷದಲ್ಲಿ 1 ಲಕ್ಷ ಕೊಕ್ಕೊ ಸಸಿಗಳನ್ನು ಬೆಳೆಗಾರ-ಸದಸ್ಯರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ಸಂಸ್ಥೆ ಯೋಜಿಸಿದೆ.ಸದಸ್ಯ ಸೌಲಭ್ಯ ಯೋಜನೆಗಳಡಿ ರೂ.86.42 ಲಕ್ಷ ನೆರವು ಬೆಳೆಗಾರ-ಸದಸ್ಯರ ಕಲ್ಯಾಣಾಭಿವೃದ್ಧಿಯನ್ನು ಕ್ಯಾಂಪ್ಕೊ ಪ್ರಮುಖ ಆದ್ಯತೆಯಾಗಿ ಪರಿಗಣಿಸಿದೆ.2025-26ರ ಅವಧಿಯಲ್ಲಿ ವಿವಿಧ ಸದಸ್ಯ ಸೌಲಭ್ಯ ಯೋಜನೆಗಳಡಿ ಒಟ್ಟು 120 ಫಲಾನುಭವಿಗಳಿಗೆ 86.42 ಲಕ್ಷ ಆರ್ಥಿಕ ನೆರವು ದೊರೆತಿದೆ.
ಈ ಸೌಲಭ್ಯಗಳನ್ನು ಪಡೆಯಲು ಅಗತ್ಯವಿರುವ ಸಕ್ರಿಯ ಸದಸ್ಯತ್ವದ ವ್ಯಾಖ್ಯಾನವನ್ನು 2025ರ ಜನವರಿ 1ರಿಂದ ಜಾರಿಗೆ ಬರುವಂತೆ ಬದಲಾಯಿಸಲಾಗಿದ್ದು, ಸದಸ್ಯರು ಹಿಂದಿನ ಮೂರು ಆರ್ಥಿಕ ವರ್ಷಗಳಲ್ಲಿ ನಿರಂತರವಾಗಿ, ವರ್ಷಕ್ಕೆ ಸರಾಸರಿ ಒಂದು ಕ್ವಿಂಟಾಲ್‌ನಂತೆ ಅಡಿಕೆ ನೀಡಿರಬೇಕಾಗುತ್ತದೆ.
ಬೆಳೆಗಾರರ ಸಭೆಗಳ ಮೂಲಕ ರೈತರೊಂದಿಗೆ ನೇರ ಸಂವಾದ ಸರಪಾಡಿ ಮತ್ತು ಪೆರ್ಲದಲ್ಲಿ ಆಯೋಜಿಸಲಾದ ಬೆಳೆಗಾರರ ಸಭೆಗಳ ಮೂಲಕ ಕ್ಯಾಂಪ್ಕೊ ಬೆಳೆಗಾರರೊಂದಿಗೆ ನೇರ ಸಂಪರ್ಕ ಉಳಿಸಿಕೊಳ್ಳುವ ಪ್ರಯತ್ನವನ್ನು ಮುಂದುವರಿಸಿದೆ. ಈ ಸಭೆಗಳು ರೈತರಿಗೆ ತಮ್ಮ ಸಮಸ್ಯೆಗಳು, ಸಲಹೆಗಳು ಮತ್ತು ನಿರೀಕ್ಷೆಗಳನ್ನು ನೇರವಾಗಿ ತಿಳಿಸಲು ಅವಕಾಶ ಕಲ್ಪಿಸಿದ್ದು, ಕ್ಷೇತ್ರಮಟ್ಟದ ಸವಾಲುಗಳನ್ನು ಅರಿತು ಬೆಳೆಗಾರರ ಶಿಫಾರಸುಗಳನ್ನು ತನ್ನ ಯೋಜನೆಗಳಲ್ಲಿ ಅಳವಡಿಸಿಕೊಳ್ಳಲು ಕ್ಯಾಂಪ್ಕೊಗೆ ನೆರವಾಗಿವೆ.
ಪ್ರಮುಖ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು:-
● ಶಿವಮೊಗ್ಗದಲ್ಲಿ 1ಲಕ್ಷ ಚೀಲ ದಾಸ್ತಾನು ಸಾಮರ್ಥ್ಯದ ಸುಮಾರು 30,000 ಚದರ ಅಡಿ ವಿಸ್ತೀರ್ಣದ ಉದ್ದೇಶಿತ ಗೋದಾಮ್ ಕಾಮಗಾರಿ.
● ಚನ್ನಗಿರಿಯಲ್ಲಿ ಗ್ರೇಡಿಂಗ್ ಹಾಲ್ ಕಾಮಗಾರಿ ಪ್ರಗತಿಯಲ್ಲಿದೆ.
● ಪೊನ್ನು ಕುನಮ್ ಶಾಖೆಯನ್ನು ಕಾಳುಮೆಣಸು ಸಂಸ್ಕರಣ ಘಟಕವಾಗಿ ಉನ್ನತಿಕರಿಸಲಾಗಿದೆ.
● ವಿಟ್ಲದಲ್ಲಿ 91 ಸೆಂಟ್ಸ್ ಖರೀದಿಸಿ ಸುಮಾರು 30,000 ಚ.ಅ ವಿಸ್ತೀರ್ಣದ ಕಚೇರಿ ಮತ್ತು ಗೋದಾಮ್ ಮಳಿಗೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
● ತಮಿಳುನಾಡಿನ ಧಾರಾಪುರಂ ಅಲ್ಲಿ 550 ಮೆ.ಟನ್ ಕೊಕ್ಕೊ ಒಣ ಬೀಜ ದಾಸ್ತಾನು ಸಾಮರ್ಥ್ಯದ 8,000 ಚ.ಅ ವಿಸ್ತೀರ್ಣದ ಗೋದಾಮ್ ನಿರ್ಮಾಣ ಮಾಡಲಾಗುವುದು. ಇಲ್ಲಿ ಈಗಾಗಲೆ 11 ಡ್ರೈಯಿಂಗ್ ಯಾರ್ಡ್ ಗಳು ಕಾರ್ಯಾಚರಣೆ ಮಾಡುತ್ತಿದ್ದು ಒಟ್ಟಾರೆ 165 ಮೆ.ಟನ್ ಕೊಕ್ಕೊ ಹಸಿ ಬೀಜ ಒಣಗಿಸುವ ಸಾಮರ್ಥ್ಯ ಹೊಂದಿದೆ. ಸೌಲಭ್ಯವನ್ನು ಮತ್ತಷ್ಟು ಸುಧಾರಿಸಲು, 28,500 ಚದರ ಅಡಿ ವಿಸ್ತೀರ್ಣದಲ್ಲಿ 4 ಹೆಚ್ಚುವರಿ ಡ್ರೈಯಿಂಗ್ ಯಾರ್ಡ್ ಗಳನ್ನು ಯೋಜಿಸಲಾಗುತ್ತಿದ್ದು, ಇದು ಹಸಿ ಕೊಕ್ಕೊ ಬೀಜಗಳಿಗೆ 60 ಮೆಟ್ರಿಕ್ ಟನ್‌ನಷ್ಟು (MT) ಹೆಚ್ಚುವರಿ ಒಣಗಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ.
ಬೆಳೆಗಾರನ ಕೈಯಲ್ಲಿ ಕ್ಯಾಂಪ್ಕೊ ಕಿಸಾನ್ ಮಿತ್ರ : ಡಿಜಿಟಲ್ ಪರಿವರ್ತನೆ ಕಾರ್ಯಕ್ರಮದ ಭಾಗವಾಗಿ, ಇಆರ್‌ಪಿ ವ್ಯವಸ್ಥೆಯೊಂದಿಗೆ ಸಂಯೋಜಿತವಾದ ಕ್ಯಾಂಪ್ಕೊ ಕಿಸಾನ್ ಮಿತ್ರ ಮೊಬೈಲ್ ಆ್ಯಪ್ ಅನ್ನು ಕ್ಯಾಂಪ್ಕೊ ಯಶಸ್ವಿಯಾಗಿ ಬಿಡುಗಡೆಗೊಳಿಸಿದೆ. ಈ ಆ್ಯಪ್ ಮೂಲಕ ಸದಸ್ಯರು ತಮ್ಮ ಪ್ರೊಫೈಲ್, ಷೇರು ವಿವರ, ಡಿವಿಡೆಂಡ್, ಪ್ರೋತ್ಸಾಹಧನ, ಠೇವಣಿ, ಸಾಲ, ಮಾರುಕಟ್ಟೆ ದರ, ಶಾಖೆಗಳ ಮಾಹಿತಿ, ಅಧಿಸೂಚನೆಗಳು, ಕ್ಯಾಂಪ್ಕೊ ಪಡೆ ವಿವರ ಸೇರಿದಂತೆ ಹಲವು ಸೇವೆ ಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸುಲಭವಾಗಿ ಪಡೆಯಬಹುದು. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್ ಎರಡರಲ್ಲೂ ಲಭ್ಯವಿದೆ. ಪಾರದರ್ಶಕ, ತಂತ್ರ ಜ್ಞಾನ ಆಧಾರಿತ ಮತ್ತು ಸದಸ್ಯ ಕೇಂದ್ರಿತ ಸೇವಾ ವಿತರಣೆಯತ್ತ ಇದು ಮಹತ್ವದ ಹೆಜ್ಜೆಯಾಗಿದೆ.
ಕ್ಯಾಂಪ್ಕೊ ಕಾರ್ಟ್ ಸೇವೆಯ ಮೂಲಕ ನೇರ ಗ್ರಾಹಕ ಸಂಪರ್ಕ:- ಕ್ಯಾಂಪ್ಕೊ ತನ್ನ ಅಧಿಕೃತ ಆನ್‌ಲೈನ್ ಶಾಪಿಂಗ್ ವೇದಿಕೆ ಕ್ಯಾಂಪ್ಕೊ ಕಾರ್ಟ್ ಅನ್ನು 2025ರ ಡಿಸೆಂಬರ್ 11ರಂದು ಆರಂಭಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕ್ಯಾಂಪ್ಕೊ ವಿಸ್ತರಣೆ : ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ವಿಸ್ತರಿಸುವ ತನ್ನ ಪ್ರಯತ್ನಗಳನ್ನು ಬಲಪಡಿಸುವ ನಿಟ್ಟಿನಲ್ಲಿ, ಕ್ಯಾಂಪ್ಕೊ (CAMPCO) ‘ನ್ಯಾಷನಲ್ ಕೋ-ಆಪರೇಟಿವ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್’ (NCEL) ನ ಸದಸ್ಯತ್ವವನ್ನು ಪಡೆದುಕೊಂಡಿದೆ. ತನ್ನ ಶಾಖೆಗಳಲ್ಲಿ ಖರೀದಿಸಿ ಸಂಸ್ಕರಿಸಿದ 130 ಮೆ.ಟನ್ ಉತ್ಕೃಷ್ಟ ಗುಣಮಟ್ಟದ ಭಾರತೀಯ ಅಡಿಕೆಯನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲಾಗಿದೆ. ಡ್ರಿಂಕಿಂಗ್ ಚಾಕೊಲೇಟ್ ಪುಡಿ ಮತ್ತು ಕೈಗಾರಿಕಾ ಕೊಕ್ಕೊ ಉತ್ಪನ್ನಗಳೂ ರಫ್ತಿನಲ್ಲಿ ಸೇರಿವೆ. 2026ರ ಜನವರಿಯಲ್ಲಿ ದುಬೈನಲ್ಲಿ ನಡೆದ ಗಲ್ಫ್ ಫುಡ್ ಫೆಸ್ಟಿವಲ್‌ನಲ್ಲಿ ಕ್ಯಾಂಪ್ಕೊ ಭಾಗವಹಿಸಿದ್ದು, ತನ್ನ ಉತ್ಪನ್ನ ಶ್ರೇಣಿಯನ್ನು ಪ್ರದರ್ಶಿಸಿ ಅಂತಾರಾಷ್ಟ್ರೀಯ ವ್ಯವಹಾರ ಅವಕಾಶಗಳನ್ನು ಶೋಧಿಸಲು ಅವಕಾಶ ದೊರೆಯಿತು.
ಸಂಶೋಧನೆ ಮತ್ತು ಗ್ರಾಮೀಣ ತಂತ್ರಜ್ಞಾನಕ್ಕೆ ಒತ್ತು:- ಸಂಶೋಧನೆ, ತಂತ್ರಜ್ಞಾನ ಮತ್ತು ರೈತಪರ ಆವಿಷ್ಕಾರಗಳಿಗೆ ಕ್ಯಾಂಪ್ಕೊ ನಿರಂತರವಾಗಿ ಮಹತ್ವ ನೀಡುತ್ತಾ ಬಂದಿದೆ.
ಮಹಾಮಂಡಲದ ಸಹಯೋಗದೊಂದಿಗೆ ಸಿಸ್ಟಮ್ಯಾಟಿಕ್ ರಿವೈಟಲೈಸೇಶನ್ ಆಫ್ ದಿ ಅರೆಕನಟ್ ಇಕೋಸಿಸ್ಟಮ್ ಇನ್ ಕರ್ನಾಟಕ ಅಂಡ್ ಕೇರಳ – ಎ ಮಲ್ಟಿಡಿಸಿಪ್ಲಿನರಿ ಫ್ರೇಮ್‌ವರ್ಕ್ ಫಾರ್ ಪ್ಯಾಥೊಲಾಜಿಕಲ್, ಅಗ್ರೊನಾಮಿಕ್ ಅಂಡ್ ಇಕೋಲಾಜಿಕಲ್ ರೆಸಿಲಿಯೆನ್ಸ್( “ಕರ್ನಾಟಕ ಮತ್ತು ಕೇರಳದಲ್ಲಿ ಅಡಿಕೆ ಪರಿಸರ ವ್ಯವಸ್ಥೆಯ ವ್ಯವಸ್ಥಿತ ಪುನಶ್ಚೇತನ — ರೋಗಶಾಸ್ತ್ರೀಯ, ಬೇಸಾಯ ಮತ್ತು ಪರಿಸರ ಸ್ಥಿತಿಸ್ಥಾಪಕತ್ವದ ಬಹುಶಿಸ್ತೀಯ ಚೌಕಟ್ಟು”) ಎಂಬ ಬಹುಶಿಸ್ತೀಯ ಸಂಶೋಧನಾ ಯೋಜನೆಯನ್ನೂ ಕ್ಯಾಂಪ್ಕೊ ಆರಂಭಿಸಿದೆ.
ಅಡಿಕೆ ಪರಿಸರ ವ್ಯವಸ್ಥೆ ಎದುರಿಸುತ್ತಿರುವ ಹೊಸ ಸವಾಲುಗಳಿಗೆ ವೈಜ್ಞಾನಿಕ ಮತ್ತು ಬಹುಶಿಸ್ತೀಯ ಮಾರ್ಗಗಳ ಮೂಲಕ ಪರಿಹಾರ ಕಂಡುಕೊಳ್ಳುವುದು ಈ ಯೋಜನೆಯ ಉದ್ದೇಶವಾಗಿದೆ.
ಸಂಸ್ಥಾಪಕರ ಜನ್ಮ ಶತಮಾನೋತ್ಸವ ಆಚರಣೆ! – ಸಂಸ್ಥೆಯ ಸಂಸ್ಥಾಪಕ ಸದಸ್ಯರಾದ ದಿವಂಗತ ಶ್ರೀ ವಾರಣಾಸಿ ಸುಬ್ರಾಯ ಭಟ್ ಅವರ ಜನ್ಮ ಶತಮಾನೋತ್ಸವ ವನ್ನು 2026ರ ಜೂನ್ 8ರಂದು ಪುತ್ತೂರಿನ ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆಯಲ್ಲಿ ಆಚರಿಸಲಾಯಿತು. ವರ್ಷಪೂರ್ತಿ ನಡೆಯಲಿರುವ “ಕ್ಯಾಂಪ್ಕೊ ಬ್ರಹ್ಮ- ಶತನಮನ” ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಶತಮಾನೋತ್ಸವ ಲಾಂಛನವನ್ನೂ ಬಿಡುಗಡೆ ಮಾಡಲಾಯಿತು.
ಸದೃಢ ಸದಸ್ಯತ್ವ ಮತ್ತು ಆರ್ಥಿಕ ಬುನಾದಿ:- 2026ರ ಮಾರ್ಚ್ 31ರ ಅಂತ್ಯಕ್ಕೆ ಕ್ಯಾಂಪ್ಕೊ ಒಟ್ಟು ಪಾವತಿಸಿದ ಷೇರು ಬಂಡವಾಳ ರೂ.66.27 ಕೋಟಿ ಆಗಿದೆ. 211.42 ಕೋಟಿ ಮೀಸಲು ನಿಧಿ ಮತ್ತು ರೂ.334.15 ಕೋಟಿ ಇತರ ನಿಧಿಗಳು ಸೇರಿ ಒಟ್ಟು 545.57 ಕೋಟಿಯೊಂದಿಗೆ ಕ್ಯಾಂಪ್ಕೊದ ಆರ್ಥಿಕ ಬುನಾದಿ ಸದೃಢವಾಗಿ ಮುಂದುವರಿದಿದೆ.
ಸಂಸ್ಥೆಯ ದೀರ್ಘಾವಧಿ ಸಾಲದ ರೇಟಿಂಗ್ CRISIL A (ಸ್ಥಿರ) ಮತ್ತು ಅಲ್ಪಾವಧಿ ರೇಟಿಂಗ್ CRISIL A1 ಎಂದು ಮರುನಿಗದಿಯಾಗಿದ್ದು, ಇದು ಸಂಸ್ಥೆಯ ಬಲಿಷ್ಠ ಆರ್ಥಿಕ ಸ್ಥಿತಿ ಮತ್ತು ಸಾಲಯೋಗ್ಯತೆಯನ್ನು ಸೂಚಿಸುತ್ತದೆ.
ಹಸಿರು ಇಂಧನ ಯೋಜನೆಗಳ ಮುಂದುವರಿಕೆ ಚಾಕೊಲೇಟ್ ಕಾರ್ಖಾನೆಯಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳ ಮೂಲಕ ಪರಿಸರ ಸುಸ್ಥಿರತೆಯ ಬದ್ಧತೆಯನ್ನು ಕ್ಯಾಂಪ್ಕೊ ಬಲಪಡಿಸಿದೆ. ಅಸ್ತಿತ್ವದಲ್ಲಿರುವ ಮೂರು ಪವನ ವಿದ್ಯುತ್ ಘಟಕಗಳು 2025-26ರಲ್ಲಿ 39.40 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿ/ವೀಲಿಂಗ್ ಮಾಡಿದ್ದು, ಇದು ಚಾಕೊಲೇಟ್ ಕಾರ್ಖಾನೆಯ ಒಟ್ಟು ಇಂಧನ ಅಗತ್ಯದ ಸುಮಾರು ಶೇ. 56.81ರಷ್ಟನ್ನು ಪೂರೈಸಿದೆ.
ಪುತ್ತೂರಿನ ಸಿಸಿಎಫ್‌ನಲ್ಲಿರುವ 500 ಕಿ.ವ್ಯಾ. ಸೌರ ವಿದ್ಯುತ್ ಯೋಜನೆ 4.79 ಲಕ್ಷ ಯೂನಿಟ್ ಉತ್ಪಾದಿಸಿದ್ದು, ಇದು ಕಾರ್ಖಾನೆಯ ಇಂಧನ ಅಗತ್ಯದ ಸುಮಾರು ಶೇ. 7ರಷ್ಟಾಗಿದೆ. ಮತ್ತೊಂದು 500 ಕಿ.ವ್ಯಾ. ಛಾವಣಿ ಸೌರ ಯೋಜನೆಯ ಕಾರ್ಯಾರಂಭವೂ ಪ್ರಗತಿಯಲ್ಲಿದೆ.ಹೆಚ್ಚುವರಿಯಾಗಿ 580 ಕೆ.ಡಬ್ಲ್ಯೂ (KW) ಸಾಮರ್ಥ್ಯದ ಮೇಲ್ಛಾವಣಿ ಸೌರ (ರೂಫ್‌ಟಾಪ್ ಸೋಲಾರ್) ಯೋಜನೆಯು ಪ್ರಗತಿಯಲ್ಲಿದ್ದು, ಇದು ಹೆಚ್ಚುವರಿ ಶೇ. 8-9 ರಷ್ಟು ಇಂಧನ/ವಿದ್ಯುತ್ ಬೇಡಿಕೆಯನ್ನು ಪೂರೈಸುವ ನಿರೀಕ್ಷೆಯಿದೆ. ಕ್ಯಾಂಪ್ಕೊ ‘ಮುಕ್ತ ಪ್ರವೇಶ’ದ (Open Access) ಮೂಲಕ ಅಂದಾಜು 15 ಲಕ್ಷ ಯುನಿಟ್ ವಿದ್ಯುತ್ ಖರೀದಿಸಲು ಸಹ ಯೋಜಿಸುತ್ತಿದೆ ಎಂದವರು ಮಾಹಿತಿ ನೀಡಿದರು.
ತೆರಿಗೆ ಇಳಿಕೆಯ ಪ್ರಯೋಜನ ಗ್ರಾಹಕರಿಗೆ ವರ್ಗಾವಣೆ:- ಭಾರತ ಸರ್ಕಾರ ಪ್ರಕಟಿಸಿದ ಜಿಎಸ್‌ಟಿ ದರ ಪರಿಷ್ಕರಣೆಯನ್ನು ಸ್ವಾಗತಿಸಿದ ಕ್ಯಾಂಪ್ಕೊ, ತೆರಿಗೆ ಗ್ರಾಹಕರಿಗೆ ತಕ್ಷಣವೇ ವರ್ಗಾಯಿಸಿದೆ.
ಮುಂದಿನ ಹೆಜ್ಜೆ:- 2026-27ನೇ ಸಾಲಿಗೆ ಕ್ಯಾಂಪ್ಕೊ ಹಲವು ಯೋಜನೆಗಳನ್ನು ರೂಪಿಸಿದೆ. ಸಂಸ್ಥೆ
● ಅಡಿಕೆ ಖರೀದಿ ಮತ್ತು ಬೆಳೆಗಾರರಿಗೆ ಮಾರುಕಟ್ಟೆ ಬೆಂಬಲದ ಬಲವರ್ಧನೆ;
● ಶಾಖೆ ಮತ್ತು ಖರೀದಿ ಕೇಂದ್ರಗಳ ಜಾಲದ ವಿಸ್ತರಣೆ;
● ಸಕ್ರಿಯ ಸದಸ್ಯರಿಗೆ ರಿಯಾಯಿತಿ ದರದ ಕೃಷಿ ಪರಿಕರಗಳ ಮುಂದುವರಿಕೆ;
● ಬೆಳೆಗಾರ-ಸದಸ್ಯರಿಗೆ 1 ಲಕ್ಷ ಕೊಕ್ಕೊ ಸಸಿಗಳ ವಿತರಣೆ;
● ಚಾಕೊಲೇಟ್ ವಿಭಾಗದ ಬಲವರ್ಧನೆ ಮತ್ತು ಉತ್ಪಾದನಾ ದಕ್ಷತೆಯ ಸುಧಾರಣೆ;
● ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳ ವಿಸ್ತರಣೆ;
● ಡಿಜಿಟಲ್ ಮತ್ತು ತಂತ್ರಜ್ಞಾನ ಆಧಾರಿತ ಸದಸ್ಯ ಸೇವೆಗಳ ಪ್ರೋತ್ಸಾಹ;
● ಅಡಿಕೆ ಮತ್ತು ತೋಟಗಾರಿಕಾ ಬೆಳೆಗಳ ಮೇಲಿನ ವೈಜ್ಞಾನಿಕ ಸಂಶೋಧನೆಗೆ ಬೆಂಬಲ;
● ಮಣ್ಣು ಪರೀಕ್ಷೆ ಮತ್ತು ಇತರ ರೈತಪರ ಸೇವೆಗಳ ವಿಸ್ತರಣೆ;
● ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಉತ್ಪಾದನಾ ಪದ್ಧತಿಗಳ ಬಲವರ್ಧನೆ;
● ಸದಸ್ಯ ಕ್ಷೇಮಾಭಿವೃದ್ಧಿ ಮತ್ತು ಸೌಲಭ್ಯ ಯೋಜನೆಗಳ ಮುಂದುವರಿಕೆ.
1.53 ಲಕ್ಷಕ್ಕೂ ಹೆಚ್ಚು ಬೆಳೆಗಾರ-ಸದಸ್ಯರ ಬಲಿಷ್ಠ ತಳಹದಿ, ವ್ಯಾಪಕ ಖರೀದಿ ಮತ್ತು ಮಾರಾಟ ಜಾಲ, ವೈವಿಧ್ಯಮಯ ವ್ಯವಹಾರ ಚಟುವಟಿಕೆಗಳು ಹಾಗೂ ಸದೃಢ ಆರ್ಥಿಕ ಬುನಾದಿಯೊಂದಿಗೆ, ರೈತರ ಹಿತರಕ್ಷಣೆ, ಕೃಷಿ ಉತ್ಪನ್ನಗಳಿಗೆ ಉತ್ತಮ ಮೌಲ್ಯ ಪ್ರಾಪ್ತಿ ಮತ್ತು ಕೃಷಿ ಸಮುದಾಯದ ಸುಸ್ಥಿರ ಅಭಿವೃದ್ಧಿ ಎಂಬ ತನ್ನ ಮೂಲ ಸಹಕಾರಿ ಧ್ಯೇಯಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದುಸತೀಶ್ಚಂದ್ರ ಎಸ್. ಆರ್. ಮಾಹಿತಿ ನೀಡಿದರು.
ಸುದ್ದಿ ಗೋಷ್ಠಿಯಲ್ಲಿ ಕ್ಯಾಂಪ್ಕೋ ಉಪಾಧ್ಯಕ್ಷ ಪದ್ನರಾಜ ಪಟ್ಟಾಜೆ,ನಿರ್ದೇಶಕರಾದ ಎಂ. ಪುರುಷೋತ್ತಮ ಭಟ್,ಮಹಾಪ್ರಬಂಧ ಕರಾದ ರೇಶ್ಮಾ ಮಲ್ಯ,ಉಪ ಮಹಾ ಪ್ರಬಂಧ ಕ ಎಸ್ .ಗೋವಿಂದ ಭಟ್ ಮೊದಲಾದವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post