ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ಸಿಗದೆ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಗ್ರೀಷ್ಮಾ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಬಂದಿದ್ದಾಳೆ.
ಕಳೆದ ಸೆ.27 ಮತ್ತು 29ರಂದು ನಡೆದಿದ್ದ 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಇಂದು(ಅ.11) ಪ್ರಕಟವಾಗಿದ್ದು, ಮೂಡಬಿದ್ರೆಯ ಆಳ್ವಾಸ್ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ ಕೊರಟಗೆರೆಯ ನರಸಿಂಹಮೂರ್ತಿ ಮತ್ತು ಪದ್ಮಾವತಿ ದಂಪತಿಯ ಪುತ್ರಿ ಗ್ರೀಷ್ಮಾ ಎನ್. ನಾಯಕ್ 625ಕ್ಕೆ 599 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಗ್ರೀಷ್ಮಾ ಮನೆಯಲ್ಲಿ ಸಂಭ್ರಮ ಮನೆಮಾಡಿದ್ದು, ಮಗಳಿಗೆ ಸಿಹಿ ತಿನ್ನಿಸುವ ಮೂಲಕ ಪಾಲಕರು ಸಂತಸ ಹಂಚಿಕೊಂಡರು.
ಮೂಡಬಿದ್ರೆಯ ಆಳ್ವಾಸ್ ಶಾಲೆಯಲ್ಲಿ ಓದುತ್ತಿದ್ದ ಗ್ರೀಷ್ಮಾ ಎನ್. ನಾಯಕ್, 9ನೇ ತರಗತಿಯಲ್ಲಿ ಶೇ.96 ಅಂಕ ಪಡೆದಿರುವ ಈಕೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದಳು. ನಂತರ ಶಾಲಾ ಆಡಳಿತ ಮಂಡಳಿ 9ನೇ ತರಗತಿಯ ಶುಲ್ಕ ಬಾಕಿ ಇದ್ದ ಹಿನ್ನೆಲೆಯಲ್ಲಿ 10ನೇ ತರಗತಿಗೆ ಪ್ರವೇಶ ಕಲ್ಪಿಸಿಲ್ಲ. ಪಾಲಕರು ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಂದಣಿ ಬಗ್ಗೆ ಸಂಸ್ಥೆಯಲ್ಲಿ ವಿಚಾರಿಸಿದಾಗ ಶುಲ್ಕ ಕಟ್ಟದ ಕಾರಣ ಪರೀಕ್ಷೆಗೆ ನೋಂದಣಿಯಾಗದ ಬಗ್ಗೆ ತಿಳಿದುಬಂದಿದೆ. ಇದರಿಂದ ನೊಂದ ವಿದ್ಯಾರ್ಥಿನಿ ಮಕ್ಕಳ ಹಕ್ಕುಗಳ ಆಯೋಗದ ಮೊರೆ ಹೋಗಿ, ಡಿಡಿಪಿಐ, ಶಿಕ್ಷಣ ಸಚಿವರಿಗೆ ಇ-ಮೇಲ್ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕಳೆದ ಜುಲೈ 17ರಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ವಿಷಯ ತಿಳಿದ ಕೂಡಲೇ ಅಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು.
ಗ್ರೀಷ್ಮಾ ನಾಯಕ್ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆಸರು ನೋಂದಾಯಿಸಿದಲ್ಲವಾದ್ದರಿಂದ ನಿಯಮಾನುಸಾರ ಜುಲೈನಲ್ಲಿ ನಡೆಯಲಿರುವ ಪರೀಕ್ಷೆಗೆ ಹಾಜರಾಗಲು ಅವಕಾಶವಿಲ್ಲ. ಪೂರಕ ಪರೀಕ್ಷೆಗೆ ಹಾಜರಾಗಲು ಆಕೆಗೆ ಖಚಿತ ಅವಕಾಶ ನೀಡಿ ಉತ್ತೀರ್ಣಗೊಳಿಸುವುದಲ್ಲದೇ ಪಿಯು ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಅಭಯ ನೀಡಿದ್ದರು. ಯಾವುದೇ ಕಾರಣಕ್ಕೂ ಮನಸ್ಸಿಗೆ ಬೇಸರ ಮಾಡಿಕೊಳ್ಳದೇ ಉತ್ತಮ ಅಂಕಗಳನ್ನು ಪಡೆಯಲು ಶ್ರಮವಹಿಸಿ ಅಭ್ಯಾಸದತ್ತ ಗಮನ ಹರಿಸಬೇಕು. ಪರೀಕ್ಷೆಗೆ ಚೆನ್ನಾಗಿ ಓದುವುದಷ್ಟೇ ನೀನು ಮಾಡಬೇಕಾದ ಕೆಲಸ ಎಂದು ವಿದ್ಯಾರ್ಥಿನಿಗೆ ಸ್ಥೈರ್ಯ ತುಂಬಿದ್ದರು. ಕಳೆದ ಸೆ.27 ಮತ್ತು 29ರಂದು ನಡೆದ ಪೂರಕ ಪರೀಕ್ಷೆಗೆ ಗ್ರೀಷ್ಮಾ ಹಾಜರಾಗಿದ್ದಳು.