ಬೆಂಗಳೂರು, ಅ.11: ರಾಜ್ಯ ಸರಕಾರದ ವತಿಯಿಂದ 20 ಕಂಬಳಗಳಿಗೆ ತಲಾ 5 ಲಕ್ಷ ರೂ.ಗಳಂತೆ 1 ಕೋಟಿ ರೂಪಾಯಿ ಸಹಾಯಧನವನ್ನು ನೀಡಲಾಗುವುದು. ದೇಸಿ ಹಾಗೂ ಐತಿಹಾಸಿಕವಾದ ಕಂಬಳ ಕ್ರೀಡೆಗೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬುಧವಾರ ನಗರದ ಅರಮನೆ ಮೈದಾನದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಂಬಳ ಸಮಿತಿ, ಬೆಂಗಳೂರಿನಲ್ಲಿರುವ ತುಳು ಕೂಟ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸರ್ವ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬೆಂಗಳೂರು ಕಂಬಳ ಸಮಿತಿ ವತಿಯಿಂದ ಆಯೋಜಿಸಲಾಗಿರುವ ‘ಬೆಂಗಳೂರು ಕಂಬಳ-ನಮ್ಮ ಕಂಬಳ’ದ ಕರೆಪೂಜೆ (ಗುದ್ದಲಿ ಪೂಜೆ) ನೆರವೇರಿಸಿ ಅವರು ಮತನಾಡಿದರು.
ನವೆಂಬರ್ 25 ಮತ್ತು 26ರಂದು ಕಂಬಳ ನಡೆಯಲಿದೆ. ಕರಾವಳಿಯಿಂದ ಸುಮಾರು 130 ಜೋಡಿ ಕೋಣಗಳನ್ನು ತರಲಾಗುತ್ತದೆ ಎಂದು ಸಂಘಟಕರು ತಿಳಿಸಿದರು.
ʻʻಮನುಷ್ಯನ ಬಳಿ ತೆಗೆದುಕೊಂದು ಹೋಗಲು ಏನೂ ಇಲ್ಲ, ತನ್ನ ಬಳಿ ಇರುವುದನ್ನೆಲ್ಲಾ ಬಿಟ್ಟು ಹೋಗಲೇಬೇಕು. ಆದರೆ ನಮ್ಮ ಸಂಸ್ಕೃತಿಯನ್ನು ಉಳಿಸಿ, ಪರಿಚಯಿಸಬೇಕು ಎಂದು ಶಾಸಕರಾದ ಅಶೋಕ್ ರೈ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನರು ಒಂದಾಗಿರುವುದು ಸಂತೋಷದ ವಿಚಾರʼʼ ಎಂದರು.
ʻʻಉಳಿಪೆಟ್ಟು ಬೀಳದೆ ಯಾವುದೇ ಶಿಲೆ ಪ್ರತಿಮೆ ಆಗುವುದಿಲ್ಲ. ಭೂಮಿ ಉಳದೆ ಯಾವುದೇ ಬೆಳೆ ಬೆಳೆಯಲು ಆಗುವುದಿಲ್ಲ. ಅದರಂತೆ ಅರಮನೆ ಮೈದಾನದಲ್ಲಿ ಒಂದಷ್ಟು ಅಭಿವೃದ್ದಿ ಕೆಲಸಗಳನ್ನು ಈ ನೆಪದಲ್ಲಿ ಮಾಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಂತಹ ಸದಾನಂದ ಗೌಡರು, ಎನ್.ಎ ಹ್ಯಾರಿಸ್ ಅವರು ಬೆಂಗಳೂರಿನಲ್ಲಿ ನಾಯಕರಾಗಿ ಬೆಳೆದಿದ್ದಾರೆʼʼ ಎಂದು ಹೇಳಿದರು.
‘ತುಳುಕೂಟಕ್ಕೆ 50 ವರ್ಷದ ಸಂಭ್ರಮ ಹಿನ್ನೆಲೆ ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡಲಾಗುತ್ತಿದ್ದು ನವೆಂಬರ್ 24, 25, 26ರಂದು ಕಂಬಳ ನಡೆಯಲಿದೆ. 1 ತಿಂಗಳ ಕಾಲ ಕಂಬಳಕ್ಕಾಗಿ ಟ್ರ್ಯಾಕ್ ಸಿದ್ದಪಡಿಸಲಾಗುತ್ತೆ. 125ರಿಂದ 150 ಜೊತೆ ಕೋಣಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಕರೆದುತಂದು ಕಂಬಳ ಏರ್ಪಡಿಸಲಾಗುತ್ತಿದೆ. ಈ ಕಂಬಳಕ್ಕೆ 8 ಲಕ್ಷ ಜನ ಸೇರುವ ನಿರೀಕ್ಷೆ ಇದೆ’ ಎಂದು ಆಯೋಜಕರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post