ಮಂಗಳೂರು, ಅ 11 : “ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹೇಳೋರು ಕೇಳೋರು ಯಾರೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿರುವ ಗಲಭೆಯಲ್ಲಿ ನಾವಿದನ್ನು ಕಣ್ಣಾರೆ ಕಂಡಿದ್ದೇವೆ. ಅಲ್ಲಿ ಅಮಾಯಕರ ಮೇಲೆ ಹಲ್ಲೆ ಮನೆಗಳ ಮೇಲೆ ದಾಳಿಗಳು ನಡೆದಿವೆ. ಮುಖ್ಯಮಂತ್ರಿ, ಗೃಹಸಚಿವರು ಏನೂ ನಡೆದೇ ಇಲ್ಲವೆಂಬಂತೆ ಮಾತಾಡುತ್ತಿದ್ದಾರೆ” ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಕಿಡಿಕಾರಿದ್ದಾರೆ.
ಜಾಗದ ರಿಜಿಸ್ಟ್ರೇಶನ್ ಉದ್ದೇಶಕ್ಕೆ ಹೋದವರ ಆಧಾರ್ ಮಾಹಿತಿ ಸೋರಿಕೆಯಾಗುತ್ತಿದ್ದು, ಇದಕ್ಕೆ ರಾಜ್ಯ ಸರಕಾರವೇ ಹೊಣೆ. ಇವರು ಖಾಸಗಿ ಕಂಪನಿಗೆ ಸಾಫ್ಟ್ ವೇರ್ ಗುತ್ತಿಗೆ ಕೊಟ್ಟಿದ್ದು, ಅಲ್ಲಿಂದಲೇ ಜನರ ಮಾಹಿತಿ ಸೋರಿಕೆ ಆಗಿರುವ ಶಂಕೆಯಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಹಣ ಕಳಕೊಂಡವರಿಗೆ ಹಣವನ್ನು ರಾಜ್ಯ ಸರಕಾರವೇ ಹಿಂತಿರುಗಿಸಬೇಕು ಎಂದು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
ತನ್ನ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಶಾಸಕರು, ಮಂಗಳೂರಿನ ಉಪ ನೋಂದಣಿ ಕಚೇರಿಯಿಂದ ಆಧಾರ್ ಮಾಹಿತಿ ಸೋರಿಕೆಯಾಗುತ್ತಿರುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನನ್ನ ಬಳಿ ಹಲವರು ಹಣ ಕಳಕೊಂಡಿದ್ದಾಗಿ ದೂರು ಹೇಳಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರದ ಕಂದಾಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ತಿಳಿಸಿದ್ದೇನೆ. ವಂಚನೆ ಆಗಿರುವ ಬಗ್ಗೆ ತಿಳಿದಿದೆ, ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೆ, ಮಂಗಳೂರು ಕಮಿಷನರ್ ಅವರಿಗೂ ಹೇಳಿದ್ದು ತನಿಖೆ ಮಾಡುವ ಭರವಸೆ ನೀಡಿದ್ದಾರೆ. ಇಷ್ಟೆಲ್ಲ ಎಡವಟ್ಟು ಆಗಿದ್ದರೂ ರಾಜ್ಯದ ಸಚಿವರಾಗಲೀ, ಯಾವುದೇ ವ್ಯಕ್ತಿಯೂ ಈ ಬಗ್ಗೆ ತುಟಿ ಬಿಚ್ಚಿಲ್ಲ. ಆಧಾರ್ ಮಾಹಿತಿ ಸೋರಿಕೆ ಗಂಭೀರ ವಿಚಾರವಾಗಿದ್ದು ಉನ್ನತ ಮಟ್ಟದ ತನಿಖೆಯಾಗಬೇಕಿದೆ ಎಂದು ಹೇಳಿದ್ದಾರೆ.
“ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಬಂಧುಗಳಿಗೆ ಅನ್ಯಾಯವಾಗುತ್ತಿದೆ. ರಾಜ್ಯದೆಲ್ಲೆಡೆ ಆಧಾರ್ ನೋಂದಣಿ ಮತ್ತಿತರ ಕೆಲಸವನ್ನು ಮಾಡಿಕೊಳ್ಳಲು ಜನರು ಸರಕಾರಿ ಕಚೇರಿಗಳಲ್ಲಿ ಕ್ಯೂ ನಿಲ್ಲುವ ಪರಿಸ್ಥಿತಿಯಿದೆ. ಎಲ್ಲಿ ನೋಡಿದರೂ ಸರ್ವರ್ ಸಮಸ್ಯೆ ಎನ್ನುತ್ತಾರೆ. ಇನ್ನು ಕರೆಂಟ್ ಬಿಲ್ ಹೆಚ್ಚಳ, ಲೋಡ್ ಶೆಡ್ಡಿಂಗ್ ಸಮಸ್ಯೆ ಸಾಮಾನ್ಯವಾಗುತ್ತಿದೆ. ಈ ಬಗ್ಗೆ ರಾಜ್ಯ ಸರಕಾರ ಯಾವುದೇ ತುರ್ತು ಕ್ರಮ ಜರುಗಿಸುವುದು ಕಾಣುತ್ತಿಲ್ಲ. ಸರಕಾರ ವಿದ್ಯುತ್ ಬಿಲ್ ಏರಿಸಿ ಜನರಿಗೆ ತೊಂದರೆಯನ್ನು ನೀಡುತ್ತಿದೆ” ಎಂದು ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್, ವಿಜಯ್ ಕುಮಾರ್, ನಿತಿನ್ ಕುಮಾರ್, ಮಾಜಿ ಮೇಯರ್ ಗಳಾದ ಪ್ರೇಮಾನಂದ ಶೆಟ್ಟಿ, ದಿವಾಕರ್ ಪಾಂಡೇಶ್ವರ್, ಪ್ರಧಾನ ಕಾರ್ಯದರ್ಶಿ ರೂಪಾ ಬಂಗೇರ, ಸುರೇಂದ್ರ ಜಪ್ಪಿನಮೊಗರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post