ಮಂಗಳೂರು, ಜ.11: ಪಾರ್ಟಿಯಲ್ಲಿ ಯುವತಿಗೆ ಅಮಲು ಪದಾರ್ಥ ಕೊಟ್ಟು ಆಕೆಯನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ಅಪರಾಧಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ 10 ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.
ಮಂಗಳೂರು ನಗರದ ಲೈಟ್ ಹೌಸ್ ಹಿಲ್ ರಸ್ತೆಯ ನಿವಾಸಿ ಬ್ರಿಯಾನ್ ರಿಚರ್ಡ್ ಅಮ್ಮನ್ನ (34) ಶಿಕ್ಷೆಗೊಳಗಾದ ವ್ಯಕ್ತಿ. ಸಂತ್ರಸ್ತ ಯುವತಿ ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿದ್ದು, ಇವರ ಗ್ರಾಹಕರು ಮತ್ತು ಸ್ನೇಹಿತರಾದ ನೌಕಾಪಡೆಯಲ್ಲಿ ಉದ್ಯೋಗದಲ್ಲಿದ್ದ ಜಾಯ್ಲಿನ್ ಗ್ಲಾನೆಲ್ ಎಂಬವರಿಗೆ ಅಂಡಮಾನ್ ಗೆ ವರ್ಗಾವಣೆಯಾಗಿತ್ತು. ಇದರ ನೆಪದಲ್ಲಿ 2021ರ ಫೆಬ್ರವರಿ 5ರಂದು ಪುತ್ತೂರಿನ ಕೊಡಿಪ್ಪಾಡಿ ಗ್ರಾಮದ ಕೋಡಿಕಾಡು ಎಂಬಲ್ಲಿನ ಗೆಸ್ಟ್ ಹೌಸ್ ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು.
ಪಾರ್ಟಿಗೆ ಯುವತಿಯನ್ನೂ ಆಹ್ವಾನಿಸಿದ್ದು, ಜಾಯ್ಲಿನ್ ಅವರ ಸ್ನೇಹಿತನ ಕಾರಿನಲ್ಲಿ ಪುತ್ತೂರಿಗೆ ತೆರಳಿದ್ದರು. ಸ್ನೇಹಿತರು ಪಾರ್ಟಿಯಲ್ಲಿ ತೊಡಗಿದ್ದಾಗ ಯುವತಿಗೆ ವೈನ್ ಎಂದು ಕುಡಿಯಲು ಕೊಟ್ಟಿದ್ದರು. ಪಾರ್ಟಿ ಮಧ್ಯೆ ಜಾಯ್ಲಿನ್ ಸ್ನೇಹಿತ ಎಂದು ಆರೋಪಿ ಬ್ರಿಯಾನ್ ತನ್ನನ್ನು ಪರಿಚಯಿಸಿಕೊಂಡಿದ್ದ. ಪಾರ್ಟಿ ಮುಗಿದ ಬಳಿಕ ಎಲ್ಲರೂ ಗೆಸ್ಟ್ ಹೌಸ್ ರೂಮಿಗೆ ತೆರಳಿದ್ದರು. ಪಾರ್ಟಿ ಆಯೋಜಿಸಿದ್ದ ಜಾಯ್ಲಿನ್ ಮತ್ತು ರೆಬೆಕಾ ಎಂಬವರು ಯುವತಿ ಇದ್ದ ರೂಮಿನಲ್ಲೇ ಮಲಗಿದ್ದರು. ಅರ್ಧ ರಾತ್ರಿಯಲ್ಲಿ ಯುವತಿ ಎಚ್ಚರಗೊಂಡಾಗ ಜಾಯ್ಲಿನ್ ಮತ್ತು ರೆಬೆಕಾ ರೂಮಿನಲ್ಲಿ ಇರಲಿಲ್ಲ. ಈಕೆಯ ರೂಮಿನಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಆರೋಪಿ ಬ್ರಿಯಾನ್ ರಿಚರ್ಡ್ ಅಲ್ಲಿಗೆ ಬಂದು ಯುವತಿ ಮೇಲೆ ಬಲವಂತದಿಂದ ಅತ್ಯಾಚಾರ ನಡೆಸಿದ್ದಾನೆ. ಯುವತಿ ಮರುದಿನ ಫೆ.6ರಂದು ಪುತ್ತೂರಿನ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಳು.
ಯುವತಿಗೆ ತಿಳಿಯದಂತೆ ಆರೋಪಿ ಬ್ರಿಯಾನ್, ಕುಡಿಯಲು ಕೊಟ್ಟಿದ್ದ ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿದ್ದ. ಅಮಲಿನಲ್ಲಿದ್ದಾಗ ಅತ್ಯಾಚಾರ ನಡೆಸಿದ್ದಾನೆ. ಪುತ್ತೂರು ಮಹಿಳಾ ಠಾಣೆ ನಿರೀಕ್ಷಕ ತಿಮ್ಮಪ್ಪ ನಾಯ್ಕ ದೋಷಾರೋಪ ಸಲ್ಲಿಸಿದ್ದರು. ಸಂತ್ರಸ್ತೆ ಪರವಾಗಿ 21 ಸಾಕ್ಷಿದಾರರು ಕೋರ್ಟಿನಲ್ಲಿ ಸಾಕ್ಷಿ ಹೇಳಿದ್ದು 37 ದಾಖಲೆಗಳನ್ನು ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ ಕಾಂತರಾಜು ಎಸ್.ವಿ. ಅವರು ಆರೋಪ ಸಾಬೀತಾಗಿದ್ದರಿಂದ ತೀರ್ಪು ಪ್ರಕಟಿಸಿದ್ದು 10 ವರ್ಷ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post