ಉಡುಪಿ, ಜೂನ್ 12: ತಮಿಳುನಾಡು ಸಿಎಂ ಆದ ಬಳಿಕ ವಿಜಯ್ ಅವರು ಮೊದಲ ಬಾರಿಗೆ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರಿಗೆ ಭೇಟಿ ನೀಡಿದ್ದು, ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ಪ್ರಧಾನ ಅರ್ಚಕ ರಾಮಚಂದ್ರ ಅಡಿಗರು ಪೂಜೆಗೆ ಸಂಕಲ್ಪ ನೆರವೇರಿಸಿದ್ದು, ದೇವಸ್ಥಾನದ ಅರ್ಚಕರು ಸಿಎಂ ವಿಜಯ್ ಕೈಗೆ ರಕ್ಷಾ ದಾರ ಕಟ್ಟಿದರು. ಇನ್ನು 30 ನಿಮಿಷಗಳ ಕಾಲ ದೇವಸ್ಥಾನದಲ್ಲಿದ್ದ ವಿಜಯ್, ಅವರು ಮೂಕಾಂಬಿಕಾ ದೇವಿಗೆ 1ಕೆಜಿ 600 ಗ್ರಾಮ್ ತೂಕದ ಬೆಳ್ಳಿಯ ಖಡ್ಗ ಸಮರ್ಪಿಸಿ ತೆರಳಿದ್ದಾರೆ.



ದೇವಸ್ಥಾನಕ್ಕೆ ಆಗಮಿಸಿದ ಅವರನ್ನು ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಸಿಎಂ ಅಭಿಮಾನಿಗಳತ್ತ ತೆರಳಿ ಶುಭಾಶಯ ವಿನಿಮಯ ಮಾಡಿಕೊಂಡರು. ದೇವರ ದರ್ಶನದ ವೇಳೆ ಭಕ್ತರ ಸಂಚಾರವನ್ನು ನಿಯಂತ್ರಿಸಿ ಅಗತ್ಯ ವ್ಯವಸ್ಥೆ ಮಾಡಲಾಗಿತ್ತು.
ವಿಜಯ್ ಭೇಟಿಯ ಹಿನ್ನೆಲೆಯಲ್ಲಿ ದೇವಸ್ಥಾನದ ಪರಿಸರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಭದ್ರತಾ ದೃಷ್ಟಿಯಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ದೇವಸ್ಥಾನಕ್ಕೆ ಆಗಮಿಸುವ ಮಾರ್ಗಗಳಲ್ಲಿಯೂ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಇದೀಗ ನೀಡಿರುವ ‘Z+’ ಶ್ರೇಣಿಯ ಭದ್ರತೆಯಲ್ಲಿ 55 ಕೇಂದ್ರ ಭದ್ರತಾ ಸಿಬ್ಬಂದಿಯ ತುಕಡಿ ಸಿಎಂಗೆ 24/7 ಭದ್ರತೆ ನೀಡುತ್ತಿದೆ. ಭದ್ರತಾ ತುಕಡಿಯಲ್ಲಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿ(NSG)ಯ ಕಮಾಂಡೋಗಳೂ ಸೇರಿದ್ದಾರೆ. ಎಲ್ಲಾ ಸಿಬ್ಬಂದಿ ಅತ್ಯಾಧುನಿಕ MP5 ಸಬ್‌ಮಷಿನ್ ಗನ್‌ಗಳಿಂದ ಶಸ್ತ್ರಸಜ್ಜಿತರಾಗಿದ್ದಾರೆ. ಹೆಚ್ಚುವರಿಯಾಗಿ, ವಿಜಯ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬುಲೆಟ್ ಪ್ರೂಫ್ ವಾಹನ ಮತ್ತು ಪೈಲಟ್ ಕಾರು ಒದಗಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post