ಮಂಗಳೂರು: ಉತ್ತರ ಪ್ರದೇಶದಲ್ಲಿ ಅಡಿಕೆ ವ್ಯಾಪಾರದ ಮೇಲೆ ವಿಧಿಸಲಾಗುತ್ತಿರುವ ‘ಮಂಡಿ ತೆರಿಗೆ’ಯನ್ನು ರದ್ದುಪಡಿಸುವಂತೆ ಕೇಂದ್ರೀಯ ಅಡಿಕೆ ಮತ್ತು ಕೋಕೋ ಮಾರುಕಟ್ಟೆ ಹಾಗೂ ಸಂಸ್ಕರಣಾ ಸಹಕಾರ ಸಂಘ (ಕ್ಯಾಂಪ್ಕೋ) ನಿಯೋಗವು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಸಲ್ಲಿಸಿದೆ.
ಕರ್ನಾಟಕ ಮತ್ತು ಕೇರಳದ ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋದ ನಿಯೋಗವು ಶುಕ್ರವಾರ ಲಖನೌನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿತು. ನಿಯೋಗದ ನೇತೃತ್ವವನ್ನು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶಚಂದ್ರ ವಹಿಸಿದ್ದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಸತ್ಯನಾರಾಯಣ ಕೂಡ ಉಪಸ್ಥಿತರಿದ್ದರು.
ಉತ್ತರ ಪ್ರದೇಶದಲ್ಲಿ ಅಡಿಕೆ ವ್ಯಾಪಾರದ ಮೇಲೆ ವಿಧಿಸಲಾಗುತ್ತಿರುವ ‘ಮಂಡಿ ತೆರಿಗೆ’ಯಿಂದ ಸಹಕಾರಿ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನಿಯೋಗ ಮುಖ್ಯಮಂತ್ರಿಯವರ ಗಮನ ಸೆಳೆಯಿತು.
ಕಾನ್ಪುರ ಮಾರಾಟ ಘಟಕ ಮುಚ್ಚುವ ಪರಿಸ್ಥಿತಿ : ಕರ್ನಾಟಕದಿಂದ ಖರೀದಿಸಲಾದ ಅಡಿಕೆಗೆ ಮೂಲ ಸ್ಥಳದಲ್ಲಿಯೇ ಎಪಿಎಂಸಿ ಸೆಸ್ ಅಥವಾ ಮಾರುಕಟ್ಟೆ ಶುಲ್ಕ ಪಾವತಿಸಲಾಗುತ್ತಿದೆ. ಆದರೆ ಅದೇ ಅಡಿಕೆಗೆ ಉತ್ತರ ಪ್ರದೇಶದಲ್ಲಿ ಮತ್ತೆ ಮಂಡಿ ತೆರಿಗೆ ವಿಧಿಸಲಾಗುತ್ತಿದ್ದು, ಒಂದೇ ಉತ್ಪನ್ನದ ಮೇಲೆ ಎರಡು ಬಾರಿ ಮಾರುಕಟ್ಟೆ ಶುಲ್ಕ ವಿಧಿಸಿದಂತಾಗುತ್ತಿದೆ ಎಂದು ಕ್ಯಾಂಪ್ಕೋ ತಿಳಿಸಿತು.
ಈ ಹೆಚ್ಚುವರಿ ತೆರಿಗೆ ಹೊರೆ ಉತ್ತರ ಪ್ರದೇಶದಲ್ಲಿನ ಕ್ಯಾಂಪ್ಕೋದ ವ್ಯಾಪಾರ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯುಂಟುಮಾಡಿದ್ದು, ವಹಿವಾಟಿನಲ್ಲಿ ಗಣನೀಯ ಕುಸಿತ ಉಂಟಾಗಿದೆ. ಪರಿಣಾಮವಾಗಿ ಕಾನ್ಪುರದಲ್ಲಿದ್ದ ಕ್ಯಾಂಪ್ಕೋದ ಮಾರಾಟ ಘಟಕವನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸಂಸ್ಥೆ ತಿಳಿಸಿತು.
ಮಂಡಿ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಪಡಿಸುವುದು ಅಥವಾ ಸಹಕಾರಿ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ನೀಡುವಂತೆ ಕ್ಯಾಂಪ್ಕೋ ಮುಖ್ಯಮಂತ್ರಿಯವರನ್ನು ಕೋರಿತು. ಇಂತಹ ಕ್ರಮಗಳಿಂದ ಪಾರದರ್ಶಕ ಹಾಗೂ ಸಂಘಟಿತ ವ್ಯಾಪಾರ ವ್ಯವಸ್ಥೆಗೆ ಉತ್ತೇಜನ ಸಿಗುವುದರ ಜೊತೆಗೆ ಲಕ್ಷಾಂತರ ಅಡಿಕೆ ಬೆಳೆಗಾರರ ಹಿತಾಸಕ್ತಿಯೂ ರಕ್ಷಿತವಾಗಲಿದೆ. ಅಲ್ಲದೆ ಕಾನೂನುಬದ್ಧ ವ್ಯಾಪಾರ ಚಟುವಟಿಕೆಗಳ ಮೂಲಕ ಸರ್ಕಾರದ ಆದಾಯವೂ ಹೆಚ್ಚಲಿದೆ ಎಂದು ತಿಳಿಸಲಾಯಿತು.
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶಚಂದ್ರ ಅವರು ನೀಡಿರುವ ಹೇಳಿಕೆಯಲ್ಲಿ, ಮುಖ್ಯಮಂತ್ರಿಯವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಹಕಾರಿ ಸಂಸ್ಥೆಗಳಿಗೆ ಸರ್ಕಾರದಿಂದ ಅಗತ್ಯ ಸಹಕಾರ ನೀಡುವುದಾಗಿ ಹಾಗೂ ಮಂಡಿಸಲಾದ ಸಮಸ್ಯೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಭೇಟಿಯ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕ್ಯಾಂಪ್ಕೋದ ಚಟುವಟಿಕೆಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದರು. ರೈತರ ಕಲ್ಯಾಣ, ಮೌಲ್ಯವರ್ಧನೆ ಹಾಗೂ ಗ್ರಾಮೀಣ ಆರ್ಥಿಕಾಭಿವೃದ್ಧಿಗೆ ಕ್ಯಾಂಪ್ಕೋ ನೀಡುತ್ತಿರುವ ಕೊಡುಗೆಯನ್ನು ಅರಿಯುವ ಉದ್ದೇಶದಿಂದ ಭವಿಷ್ಯದಲ್ಲಿ ಪುತ್ತೂರಿನಲ್ಲಿರುವ ಕ್ಯಾಂಪ್ಕೋದ ಚಾಕೊಲೇಟ್ ಕಾರ್ಖಾನೆಗೆ ಭೇಟಿ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದರು ಎಂದು ಸತೀಶಚಂದ್ರ ತಿಳಿಸಿದ್ದಾರೆ. ಪ್ರಸ್ತುತ ಕ್ಯಾಂಪ್ಕೋ ಸಂಸ್ಥೆಯಲ್ಲಿ 1.50 ಲಕ್ಷಕ್ಕೂ ಅಧಿಕ ಅಡಿಕೆ ಬೆಳೆಗಾರರು ಸದಸ್ಯರಾಗಿದ್ದಾರೆ.
ಕ್ಯಾಂಪ್ಕೊ ಲಕ್ನೋ ಶಾಖೆಯ ವ್ಯವಸ್ಥಾಪಕರಾದ ರವಿಶಂಕರ್ ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಆಪ್ತ ಸಹಾಯಕ ಶಿವಪ್ರಸಾದ್ ಈ ಸಂದರ್ಭ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post