ಕಡಬ : ಫೆಲೈನ್ ಪ್ಯಾನ್ಲ್ಯುಕೋಪೆನಿಯಾ ವೈರಸ್‌ನಿಂದಾಗಿ ಮಂಗಳೂರು, ಕಡಬ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಇತರ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ನೂರಾರು ಬೆಕ್ಕುಗಳು ಸಾವನ್ನಪ್ಪುತ್ತಿವೆ. ಈ ಕುರಿತು ಮಾಹಿತಿ ನೀಡಿರುವ ಸುಳ್ಯ ತಾಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್, “ಬೆಕ್ಕುಗಳ ಸಾವಿನ ಬಗ್ಗೆ ನಮಗೆ ಪಶುಸಂಗೋಪನಾ ಇಲಾಖೆಯಿಂದ ಯಾವುದೇ ಸುತ್ತೋಲೆಗಳು ಬಂದಿಲ್ಲ. ಬೆಕ್ಕು, ನಾಯಿ, ದನ, ಮಂಗ ಸೇರಿದಂತೆ ಪ್ರಾಣಿಗಳು ಕಚ್ಚಿದ್ದು ಅಥವಾ ಪರಚ್ಚಿದ್ದೂ ಅಂತ ಹೇಳಿ ನಿತ್ಯ ಕೆಲವರು ಬಂದು ರೇಬೀಸ್ ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ. ಆದರೆ, ಇತ್ತೀಚೆಗೆ ನಡೆಯುತ್ತಿರುವ ಬೆಕ್ಕುಗಳ ಸಾವಿನ ಬಗ್ಗೆ ಹಾಗೂ ಪ್ಯಾನ್ಲ್ಯುಕೋಪೆನಿಯಾ ವೈರಸ್ಗೆ ಹೆದರಿ ಜನರು ಇಂಜೆಕ್ಷನ್ ತೆಗೆದುಕೊಳ್ಳುವ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ, ಈ ಕುರಿತು ಮಾಹಿತಿ ಪಡೆಯಲಾಗುವುದು” ಎಂದಿದ್ದಾರೆ.
ಈ ಬಗ್ಗೆ ಪಶುಸಂಗೋಪನಾ ಇಲಾಖೆ ಹೇಳುವುದೇನು?: ಜಿಲ್ಲಾ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, “ಫೆಲೈನ್ ಪ್ಯಾನ್ಲ್ಯುಕೋಪೆನಿಯಾ ವೈರಸ್ ಸೋಂಕು ಬೆಕ್ಕಿನ ದೇಹದಲ್ಲಿ ಬಿಳಿ ರಕ್ತ ಕಣಗಳ ಇಳಿಕೆಗೆ ಕಾರಣವಾಗುತ್ತದೆ. ಇದು ಫೆಲೈನ್ ಪ್ಯಾನ್ಲ್ಯುಕೋಪೆನಿಯಾ ವೈರಸ್ (ಎಫ್‌ಪಿಎಲ್‌ವಿ) ಎಂಬ ಪಾರ್ವೊವೈರಸ್ ಕುಟುಂಬದ ವೈರಾಣುವಿನಿಂದ ಉಂಟಾಗುತ್ತದೆ. ಬೆಕ್ಕುಗಳ ಪರಸ್ಪರ ಸಂಪರ್ಕದಿಂದ ಈ ಸೋಂಕು ಹರಡುತ್ತದೆ ಮತ್ತು ವ್ಯಾಕ್ಸಿನೇಷನ್ ಮಾತ್ರವೇ ಇದಕ್ಕೆ ಪರಿಹಾರ” ಎಂದರು.
ಏನೆಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ: ಬೆಕ್ಕಿನಲ್ಲಿ ಹೆಚ್ಚಿನ ಜ್ವರ, ವಾಂತಿ, ಅತಿಸಾರ (ಹೆಚ್ಚಾಗಿ ರಕ್ತಸಿಕ್ತವಾಗಿ), ಹಸಿವಿನ ಕೊರತೆ, ಅನೋರೆಕ್ಸಿಯಾ ಮತ್ತು ನಿರ್ಜಲೀಕರಣದ ಲಕ್ಷಣಗಳು ಕಾಣಿಸುತ್ತಿದ್ದು, ಕೊನೆಗೆ ಸಾವನ್ನಪ್ಪುತ್ತಿವೆ. ಇದು ಬೆಕ್ಕು ಹೊರತುಪಡಿಸಿ ಇತರ ಪ್ರಾಣಿಗಳಿಗೆ ಅಥವಾ ಮನುಷ್ಯರಿಗೆ ಹರಡುವ ರೋಗವಲ್ಲ. ಆದರೂ ಮುನ್ನೆಚ್ಚರಿಕೆ ವಹಿಸಬೇಕು. ಹಲವು ಕಡೆ ಬೆಕ್ಕು ಕಚ್ಚಿದೆ, ಪರಚಿದೆ ಎಂದು ರೆಬೀಸ್ ಇಂಜೆಕ್ಷನ್ ತೆಗೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರಾಣಿಗಳು ಕಚ್ಚಿದರೆ ಇಂಜೆಕ್ಷನ್ ತೆಗೆದುಕೊಳ್ಳುವುದು ಒಳ್ಳೆಯದೇ, ಇದರಿಂದ ಯಾವುದೇ ತೊಂದರೆ ಇಲ್ಲ. ಈ ಬಗ್ಗೆ ಆಯಾ ಭಾಗಗಳಲ್ಲಿರುವ ನಮ್ಮ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
“ಅಲೆಮಾರಿ ಮತ್ತು ಸಾಕು ಬೆಕ್ಕುಗಳು ಎಫ್‌ಪಿಎಲ್ ಸೋಂಕಿಗೆ ಬಲಿಯಾಗುತ್ತಿವೆ. ಸೋಂಕಿತ ಬೆಕ್ಕುಗಳಲ್ಲಿ ತೀವ್ರವಾಗಿ ನಿರ್ಜಲೀಕರಣ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಲಸಿಕೆ ಹಾಕಿದ ಬೆಕ್ಕುಗಳು ಸುರಕ್ಷಿತವಾಗಿವೆ. ವಯಸ್ಕ ಬೆಕ್ಕುಗಳು ತಮ್ಮ ದೇಹದ ರೋಗನಿರೋಧಕ ಶಕ್ತಿ ಅವಲಂಬಿಸಿಕೊಂಡು ಬದುಕಬಹುದು” ಎಂದು ಡಾ.ಅರುಣ್ ಕುಮಾರ್ ಶೆಟ್ಟಿ ಹೇಳಿದರು.
Discussion about this post