ಮಂಗಳೂರು, ಸೆ.12: ಮಾಲಾಶ್ರೀ ಅಭಿನಯದ ‘ಮಾರಕಾಸ್ತ್ರ’ ಸಿನೆಮಾ ಅಕ್ಟೋಬರ್ 6ರಂದು ಸಿನೆಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡದ ಪರವಾಗಿ ಡಾ.ವಿ.ನಟರಾಜ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧ ಕಡೆಗಳಲ್ಲಿ ಚಿತ್ರೀಕರಣ ನಡೆದಿದ್ದು, ಚಿತ್ರದಲ್ಲಿ ಆರು ಹಾಡುಗಳಿವೆ. ಸಿನೆಮಾದ ಹಿಂದಿ ರೈಟ್ಸ್ 1.8 ಕೋಟಿ ರೂ.ಗೆ ಮಾರಾಟವಾಗಿದ್ದು, ಸ್ಯಾಟ್ ಲೈಟ್ ಹಕ್ಕು 1.25 ಕೋಟಿ ರೂ.ಗೆ ಆಫರ್ ಬಂದಿದೆ” ಎಂದು ಮಾಹಿತಿ ನೀಡಿದರು. ಚಿತ್ರದ ನಿರ್ದೇಶಕ ಗುರುಮೂರ್ತಿ ಸುನಾಮಿ ಮಾತನಾಡಿ, ಸಿನೆಮಾದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶವಿದೆ. ಇದು ನನ್ನ 10 ವರ್ಷಗಳ ಕನಸು. ಸಿನಿಮಾ ನೋಡಿ ಆಶೀರ್ವದಿಸಿ ಎಂದರು.
ಈ ಸಿನಿಮಾದಲ್ಲಿ ಜೂ. ಅಪ್ಪು ಎಂದು ಕರೆಯಲ್ಪಡುವ ಆನಂದ್ ಆರ್ಯ ನಾಯಕರಾಗಿ ನಟಿಸುತ್ತಿದ್ದಾರೆ. ‘ನಿರ್ದೇಶಕರು ನನಗೆ ಕಥೆ ಹೇಳಿದಾಗ ಈ ಚಿತ್ರದಲ್ಲಿ ನಟಿಸಬೇಕೆಂದು ಆಸೆಯಾಯಿತು. ನಾನು ಹಿಂದೆ ‘ಛಾಯಾ’ ಎಂಬ ಚಿತ್ರದಲ್ಲಿ ನಟಿಸಿದ್ದೆ. ಇದು ಎರಡನೇ ಚಿತ್ರ. ಈ ಸಂದರ್ಭದಲ್ಲಿ ನಾನು ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತೇನೆ. ಎಲ್ಲರೂ ನನ್ನನ್ನು ಅವರ ರೀತಿ ಕಾಣುವೆ, ಅವರನ್ನೇ ಅನುಕರಣೆ ಮಾಡುತ್ತೀಯಾ ಎನ್ನುತ್ತಾರೆ. ಆದರೆ ನನಗೆ ಹಾಗನಿಸುವುದಿಲ್ಲ’ ಎಂದಿದ್ದಾರೆ ನಾಯಕ ಆನಂದ್ ಆರ್ಯ.
ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಗುರುಮೂರ್ತಿ ಸುನಾಮಿ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ದೇಶದ ದುಷ್ಟಶಕ್ತಿಗಳನ್ನು ಮಟ್ಟ ಹಾಕುವ ಶಕ್ತಿ ಪತ್ರಕರ್ತರ ಲೇಖನಿಗಿದೆ. ಕೆಟ್ಟದ್ದನ್ನು ಕಂಡರೆ ಸಿಡಿದೇಳುವ ಅಸ್ತ್ರವೇ ಈ “ಮಾರಕಾಸ್ತ್ರ” ಅಂತಲೂ ಹೇಳಬಹುದು. ಈ ವಿಷಯದ ಕುರಿತು ನಮ್ಮ ಚಿತ್ರದ ಕಥೆ ಸಾಗುತ್ತದೆ. ಇದಕ್ಕೆ “ದೇಶದ ರಕ್ಷಣೆಗಾಗಿ” ಎಂಬ ಅಡಿಬರಹವಿದೆ. ನಾನು ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಹಿರಿತೆರೆಯಲ್ಲಿ ಮೊದಲ ಚಿತ್ರ’ ಎನ್ನುತ್ತಾರೆ ನಿರ್ದೇಶಕ ಗುರುಮೂರ್ತಿ ಸುನಾಮಿ.
‘ಇದೊಂದು ಕೌಟುಂಬಿಕ ಚಿತ್ರ. ಇದರಲ್ಲಿ ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲ ಅಂಶಗಳೂ ಇವೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ’ ಎಂದು ನಿರ್ದೇಶಕ ಗುರುಮೂರ್ತಿ ಸುನಾಮಿ ತಿಳಿಸಿದರು. ಚಿತ್ರವನ್ನು ನಟರಾಜ್ ನಿರ್ಮಿಸಿದ್ದಾರೆ. ಆನಂದ್ ಆರ್ಯ ಚಿತ್ರದ ನಾಯಕ. ಹರ್ಷಿಕಾ ಪೂಣಚ್ಚ, ಭರತ್ ಸಿಂಗ್, ಉಗ್ರಂ ಮಂಜು ಮೊದಲಾದವರು ನಟಿಸಿದ್ದಾರೆ. ಮಂಜು ಕವಿ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣ ಚಿತ್ರಕ್ಕಿದೆ.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಗುರುಮೂರ್ತಿ ಸುನಾಮಿ, ನಟ ಆನಂದ್ ಆರ್ಯ, ಕ್ರಿಯೇಟಿವ್ ಹೆಡ್ ಧನಕುಮಾರ್, ಮೈಕೋ ಆನಂದ್ ಮತ್ತಿತರರು ಉಪಸ್ಥಿತರಿದ್ದರು.