ಮಂಗಳೂರು, ನ.12: ನಿಲ್ಲಿಸಿದ್ದ ಕಾರಿನಲ್ಲಿ ವ್ಯಕ್ತಿಯೊಬ್ಬರು ಕುಳಿತಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ನಗರದ ಕಂಕನಾಡಿಯಲ್ಲಿ ಕಂಡುಬಂದಿದ್ದು ಕದ್ರಿ ಪೊಲೀಸರು ಶವವನ್ನು ವೆನ್ಲಾಕ್ ಆಸ್ಪತ್ರೆಗೆ ಒಯ್ದಿದ್ದಾರೆ.
ವ್ಯಕ್ತಿಯನ್ನು ಮಣ್ಣಗುಡ್ಡ ನಿವಾಸಿ ಪ್ರಶಾಂತ್ ಕೊಟ್ಟಾರಿ (44) ಎಂದು ಗುರುತಿಸಲಾಗಿದೆ. ಇವರು ಕಂಕನಾಡಿಯ ಬೈಪಾಸ್ ರಸ್ತೆಯ ಬದಿ ಕಾರು ನಿಲ್ಲಿಸಿ, ಅದರೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಾರ್ವಜನಿಕರು ಕಾರನ್ನು ನೋಡಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಪ್ರಶಾಂತ್ ಕುಡಿತದ ಚಟ ಹೊಂದಿದ್ದು ದೈಹಿಕ ಅನಾರೋಗ್ಯ ಹೊಂದಿದ್ದರು. ಖಾಸಗಿ ಕಂಪನಿ ಒಂದರಲ್ಲಿ ಅಕೌಂಟೆಂಟ್ ಆಗಿದ್ದ ಪ್ರಶಾಂತ್ ವೈದ್ಯರ ಬಳಿ ತಪಾಸಣೆಗೆ ಹೋಗಿದ್ದರು. ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸಲಹೆ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ಮನೆಯಲ್ಲಿ ಆಸ್ಪತ್ರೆಗೆ ದಾಖಲಾಗುವುದಾಗಿ ಹೇಳಿ 50 ಸಾವಿರ ಹಣದ ಜೊತೆಗೆ ನಿನ್ನೆ ಸಂಜೆ ಕಾರಿನಲ್ಲಿ ತೆರಳಿದ್ದರು. ರಾತ್ರಿ ಮನೆಗೆ ಬಂದಿರಲಿಲ್ಲ.
ಪೊಲೀಸರು ಸ್ಥಳಕ್ಕೆ ಅಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.