ಮಂಗಳೂರು: ರೌಡಿಶೀಟರ್ ಖಾಲಿಯಾ ರಫೀಕ್ ಕೊಲೆ ಆರೋಪಿ ಯೂಸುಫ್ ಜಿಯಾನನ್ನು ಕೇರಳ ಎಟಿಎಸ್ ಮುಂಬೈಯಲ್ಲಿ ಬಂಧಿಸಿದ್ದು, ಆತನ ವಿರುದ್ಧ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿರುವುದರಿಂದ ತನಿಖೆಗೆ ಕಸ್ಟಡಿಗೆ ನೀಡುವಂತೆ ಮಂಗಳೂರು ಪೊಲೀಸರು ಕೇರಳ ನ್ಯಾಯಾಲಯಕ್ಕೆ ಮನವಿ ಮಾಡಲಿದ್ದಾರೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರ್ ಬಳಿ 2017 ಫೆ.14ರಂದು ನಡೆದಿದ್ದ ಖಾಲಿಯಾ ಕೊಲೆ ಪ್ರಕರಣದ ಆರೋಪಿ ಜಿಯಾನನ್ನು ಕೇರಳ ಪೊಲೀಸರು ಬಂಧಿಸಿರುವ ಮಾಹಿತಿ ಲಭಿಸಿದೆ. ಜಿಯಾ ವಿರುದ್ಧ ಕೇರಳ ಮತ್ತು ಕರ್ನಾಟಕದಲ್ಲಿ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿತ್ತು. ಖಾಲಿಯಾ ಕೊಲೆ ಪ್ರಕರಣದ ಹೆಚ್ಚಿನ ವಿಚಾರಣೆಗೆ ಜಿಯಾನನ್ನು ತಮ್ಮ ವಶಕ್ಕೆ ನೀಡುವಂತೆ ಶೀಘ್ರವೇ ಕೇರಳ ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಕಾಸರಗೋಡು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಲಿಯಾ ರಫೀಕ್‌ನನ್ನು ಕೋಟೆಕಾರು ಪೆಟ್ರೋಲ್ ಬಂಕ್ ಬಳಿ ಗುಂಡಿಕ್ಕಿ ಬಳಿಕ ತಲವಾರು ದಾಳಿ ನಡೆಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಉಪ್ಪಳ ಕೊಂಡೆಕೂರು ನಿವಾಸಿ ನೂರ್‌ಆಲಿ, ಪನಂತ್ತೂರು ರಶೀದ್, ಬಂಟ್ವಾಳ ಸಂಗಬೆಟ್ಟು ನಿವಾಸಿ ಹುಸೈನ್‌ನನ್ನು ಈ ಹಿಂದೆಯೇ ಮಂಗಳೂರು ಪೊಲೀಸರು ಬಂಧಿಸಿದ್ದರು. ಪ್ರಮುಖ ಆರೋಪಿ ಜಿಯಾ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ.
ಡಾನ್ ರವಿ ಪೂಜಾರಿ ಸಹಚರ: ಭೂಗತ ಪಾತಕಿ ರವಿ ಪೂಜಾರಿಯ ಸಹಚರನಾಗಿದ್ದ ಜಿಯಾ, ಹಫ್ತಾ ವಸೂಲಿ ಉದ್ದೇಶದಿಂದ 2018ರ ಡಿ.15ರಂದು ಕೇರಳದ ನಟಿ ಲೀನಾ ಮರಿಯಾ ಪೌಲ್ ಅವರ ಬ್ಯೂಟಿ ಪಾರ್ಲರ್‌ಗೆ ಗುಂಡು ಹಾರಿಸಿದ್ದ. ಈ ಘಟನೆ ಬಳಿಕ ಜಿಯಾ ವಿದೇಶಕ್ಕೆ ಪರಾರಿಯಾಗಿದ್ದು, ಕೆಲ ಸಮಯದ ಬಳಿಕ ನಕಲಿ ಪಾಸ್‌ಪೋರ್ಟ್ ಬಳಸಿ ಕೇರಳಕ್ಕೆ ಬಂದಿದ್ದ. ಗುರುವಾರ ಮತ್ತೆ ವಿದೇಶಕ್ಕೆ ಪರಾರಿಗೆ ಯತ್ನಿಸಿದ್ದ. ಈ ಸಂದರ್ಭ ಇಮಿಗ್ರೇಷನ್ ಅಧಿಕಾರಿಗಳು ನಕಲಿ ಪಾಸ್‌ಪೋರ್ಟ್ ಎಂಬುದನ್ನು ಪತ್ತೆ ಮಾಡಿ, ಮಾಹಿತಿ ಕಲೆ ಹಾಕಿದಾಗ ಕರ್ನಾಟಕ ಮತ್ತು ಕೇರಳ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿರುವುದು ಗೊತ್ತಾಯಿತು. ಕೇರಳ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ ಹಾಗೂ ಪೊಲೀಸರು ತೆರಳಿ ಜಿಯಾನನ್ನು ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Discover more from Coastal Times Kannada
Subscribe to get the latest posts sent to your email.
Discussion about this post