ಮಂಗಳೂರು, ಫೆ.12: ತನ್ನ ಬಗ್ಗೆ ಶಿಕ್ಷಕ ಮಾನಹಾನಿ ಮೆಸೇಜ್ ರವಾನಿಸಿದ ಹಿನ್ನೆಲೆ ಮನನೊಂದ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಎಸ್ಡಿಎಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪ್ರಕರಣ ಸಂಬಂಧ ಚಿತ್ರಕಲಾ ಶಿಕ್ಷಕ ರೂಪೇಶ್ ಪೂಜಾರಿ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ಬಗ್ಗೆ ಮತ್ತೊಬ್ಬ ವಿದ್ಯಾರ್ಥಿನಿಗೆ ಚಿತ್ರಕಲಾ ಶಿಕ್ಷಕ ರೂಪೇಶ್ ಪೂಜಾರಿ ಮಾನಹಾನಿ ಮೆಸೇಜ್ ಮಾಡಿ ವಿಚಾರ ತಿಳಿದ 10ನೇ ತರಗತಿ ವಿದ್ಯಾರ್ಥಿನಿ ತನ್ನ ಪೋಷಕರಿಗೆ ತಿಳಿಸಿದ್ದಳು. ಅದರಂತೆ ಶಾಲೆಗೆ ತೆರಳಿ ವಿಚಾರಿಸಲಾಗಿತ್ತು. ಫೆಬ್ರವರಿ 7 ರಂದು ಎಂದಿನಂತೆ ಶಾಲೆಗೆ ಹೋಗುತ್ತಿದ್ದಾಗ ವಿದ್ಯಾರ್ಥಿನಿ ಬಿಸ್ಕೆಟ್ ಪ್ಯಾಕೇಟ್ ಜೊತೆಗೆ ಇಲಿ ಪಾಷಾಣ ಕೂಡ ಖರೀದಿಸಿ ಕೊಂಡು ಹೋಗಿದ್ದಳು. ಬಳಿಕ, ಶಾಲೆಯಲ್ಲಿ ಬಿಸ್ಕೇಟ್ಗೆ ಇಲಿ ಪಾಷಾಣ ಲೇಪಿಸಿ ಸೇವನೆ ಮಾಡಿದ್ದಾಳೆ. ಇದರಿಂದ ಆಕೆ ಅಸ್ವಸ್ಥಗೊಂಡಿದ್ದು, ಕೂಡಲೇ ಶಿಕ್ಷಕರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಎರಡು ದಿನಗಳ ಹಿಂದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಕಿಡ್ನಿ, ಲಿವರ್ ನಿಷ್ಕ್ರಿಯಗೊಂಡ ಹಿನ್ನೆಲೆ ಇಂದು ಚಿಕಿತ್ಸೆ ಫಲಿಸದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ಪ್ರಕರಣ ಸಂಬಂಧ ಮೃತ ವಿದ್ಯಾರ್ಥಿನಿಯ ತಾಯಿ ನೀಡಿದ ದೂರಿನ ಅನ್ವಯ ಧರ್ಮಸ್ಥಳ ಠಾಣಾ ಪೊಲೀಸರು ಆರೋಪಿ ರೂಪೇಶ್ ಪೂಜಾರಿ ವಿರುದ್ಧ ಐಪಿಸಿ 354D, 509, POSO Act 12, 75JJ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post