ಮಂಗಳೂರು, ಮೇ 27: ಇತ್ತೀಚೆಗೆ ನಗರದ ಕೋಡಿಕಲ್ ಬಳಿ ಬೀಟ್ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಕೇರಳಕ್ಕೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ತಂಡ ಹುಡಿಕಿ ಬಂಧಿಸಿದ್ದಾರೆ. ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯ ಸಚಿನ್ ಕೆ ಆರ್ (24) ಮತ್ತು ನೆಲ್ಯಾಡಿಯ ಚಂದನ್ (24) ಎಂದು ಗುರುತಿಸಲಾಗಿದೆ. ಕೃತ್ಯಕ್ಕೆ ಉಪಯೋಗಿಸಿರುವ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.
ಮೇ 24 ರಂದು ಮಧ್ಯರಾತ್ರಿ 02:10 ಗಂಟೆಯ ವೇಳೆಗೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ನಾರಾಯಣಗುರು ಸಮುದಾಯ ಭವನ ರಸ್ತೆಯ ಎದುರು ಬೀಟ್ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕೆಂಪು ಬಣ್ಣದ ಎಲೆಕ್ಟಿಕಲ್ ಸ್ಕೂಟರ್ ನಲ್ಲಿ ಬಂದ ಆರೋಪಿಗಳಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಏಕಾಏಕಿ ಸಿಮೆಂಟ್ ಶೀಟ್ ತುಂಡಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ತಲೆಗೆ ಹೊಡೆದು ಹಲ್ಲೆ ನಡೆಸಿದ್ದ.
ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಕೇರಳದ ಕಾಂಗಾಡ್ ಪ್ರದೇಶದಲ್ಲಿ ಮೇ 26ರಂದು ಅರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ಕ್ರಮಕ್ಕಾಗಿ ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಅಶೋಕನಗರದ ಫಲ್ಗುಣಿ ನಗರದ ಬಾಡಿಗೆ ಮನೆಯಲ್ಲಿ ಆರೋಪಿಗಳು ವಾಸವಾಗಿದ್ದರು. ಆರೋಪಿಗಳ ಪೈಕಿ ಸಚಿನ್ ಕೆ.ಆರ್. ಎಂಬಾತನು ಕುಂಟಿಕಾನದ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಮತ್ತೊಬ್ಬ ಆರೋಪಿ ಚಂದನ್ ಕೂಳೂರಿನ ಶೋ ರೂಮ್‌ವೊಂದರಲ್ಲಿ ಟೆಕ್ನಿಷಿಯನ್ ಆಗಿದ್ದ. ಮಧ್ಯರಾತ್ರಿಯ ವೇಳೆ ಸುತ್ತಾಡುತ್ತಿದ್ದಾಗ ಬೀಟ್ ಪೊಲೀಸರು ತಡೆದು ಪ್ರಶ್ನಿಸಿದ್ದಕ್ಕೆ ಸಿಟ್ಟುಗೊಂಡು ಪೊಲೀಸರ ಮೇಲೆ ಸಿಮೆಂಟ್ ಸೀಟಿನ ತುಂಡಿನಿಂದ ಹಲ್ಲೆ ನಡೆಸಿದ್ದಾರೆಂದು ತನಿಖೆಯಲ್ಲಿ ತಿಳಿದುಬಂದಿದೆ.
Discover more from Coastal Times Kannada
Subscribe to get the latest posts sent to your email.







Discussion about this post