ಮಹಾನಗರ: ಅಂತಾರಾಷ್ಟ್ರೀಯ ಸ್ಟಾಂಡಪ್ ಪ್ಯಾಡ್ಲಿಂಗ್(ಸಪ್) ಚಾಂಪಿಯನ್‌ಶಿಪ್‌ಗೆ ಮಂಗಳೂರು ಹೊರವಲಯದ ಸಸಿಹಿತ್ಲು ಬೀಚ್ ಮತ್ತೂಮ್ಮೆ ಸಜ್ಜಾಗುತ್ತಿದೆ. ಹಿಂದೆ ಕೆಲವು ಬಾರಿ ಸರ್ಫಿಂಗ್ ಚಾಂಪಿಯನ್‌ಶಿಪ್ ನಡೆದ ಸಸಿಹಿತ್ಲು ಬೀಚ್‌ನಲ್ಲೇ ಎರಡನೇ ಆವೃತ್ತಿಯ ಸಪ್ ಸ್ಪರ್ಧೆ ಮಾರ್ಚ್ 7ರಿಂದ 9ರ ವರೆಗೆ ಸಪ್ ಸ್ಪರ್ಧೆ ನಡೆಯಲಿದೆ.
ಸಪ್‌ನ ಅಧಿಕೃತ ಮಾನ್ಯತ ಸಂಸ್ಥೆಯಾಗಿರುವ ಅಸೋಸಿಯೇಶನ್ ಆಫ್ ಪ್ಯಾಡಲ್ ಸರ್ಫ್ ಪ್ರೊಫೆಷನಲ್ಸ್ ವಲ್ಡ್ ಟೂರ್(ಎಪಿಪಿ) ಈ ಸ್ಪರ್ಧೆ ಆಯೋಜಿಸಿದೆ. ಕರಾವಳಿ ಭಾಗದಲ್ಲಿ ಸಪ್ ಕ್ರೀಡೆಯ ಬೆಳವಣಿಗೆಗೆ ಉತ್ತೇಜನ, ಪ್ರವಾಸೋದ್ಯಮಕ್ಕೂ ಕೊಡುಗೆ ನೀಡುವ ಉದ್ದೇಶದಿಂದ ಇದನ್ನು ಆಯೋಜಿಸಲಾಗಿದೆ. ಎಪಿಪಿ ವರ್ಲ್ಡ್ ಟೂರ್‌ನ ಆ್ಯತ್ಲೀಟ್‌ಗಳನ್ನು ಇದು ಸೆಳೆಯಲಿದ್ದು ಸ್ಥಳೀಯ, ಪ್ರಾದೇಶಿಕ ಪ್ರತಿಭೆಗಳಿಗೂ ವೇದಿಕೆಯಾಗಲಿದೆ.
ಎಪಿಪಿಯ ಸಿಇಒ ಟ್ರಿಸ್ಟಾನ್ ಬಾಕ್ಸ್ ಫರ್ಡ್ ಅವರು ಈ ಕುರಿತು ಪ್ರತಿಕ್ರಿಯಿಸಿ, ಕಳೆದ ವರ್ಷದ ಯಶಸ್ಸಿನ ಬಳಿಕ ಈ ವರ್ಷ ಸಸಿಹಿತ್ಲುವಿನಲ್ಲಿ ಎರಡನೇ ಆವೃತ್ತಿಯ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತಿದೆ. ಈ ಕ್ರೀಡೆಗೆ ಇನ್ನಷ್ಟು ಉತ್ತೇಜನ ಸಿಗುವ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದರು. ಸರ್ಫಿಂಗ್ ಸ್ವಾಮಿ ಫೌಂಡೇಶನ್‌ನ ನಿರ್ದೇಶಕ ಧನಂಜಯ ಶೆಟ್ಟಿ ಮಾತನಾಡಿ, ನಮ್ಮ ಪ್ಯಾಡ್ಲರ್‌ಗಳಿಗೆ ಎಪಿಪಿ ವಿಶ್ವ ಟೂರ್‌ನ ಹೆಸರಾಂತ ಆ್ಯತ್ಲೀಟ್‌ಗಳ ಜತೆ ಭಾಗವಹಿಸುವ, ಪೈಪೋಟಿ ನೀಡುವ ಹಾಗೂ ಕಲಿಯುವ ಅನುಭವ ನೀಡಲಿದೆ ಎಂದಿದ್ದಾರೆ.
ಸ್ಟಾಂಡಪ್ ಪ್ಯಾಡ್ಲಿಂಗ್ ಎಂದರೆ ಏನು? : ಇದು ಸರ್ಫಿಂಗ್ ಮಾದರಿಯದ್ದೇ ಕ್ರೀಡೆ. ಇಲ್ಲಿ ಬೋರ್ಡ್‌ಗಳ ಮೇಲೆ ನಿಂತು ಹುಟ್ಟು ಹಾಕುತ್ತಾ ಸಾಗುವುದು ಇದರ ವಿಶೇಷತೆ. ಸರ್ಫಿಂಗ್‌ನಲ್ಲಿ ಬೋರ್ಡ್ ಬಳಸಿಕೊಂಡು ಅಲೆಗಳ ಮೇಲೆ ಸಾಗುವುದಕ್ಕೆ ಅಂಕವಾದರೆ, ಸಪ್‌ನಲ್ಲಿ ಬೋರ್ಡ್ ಮೇಲೇರಿ ನಿಂತು ಹುಟ್ಟಿನ ಮೂಲಕ ನಿಯಂತ್ರಿಸುತ್ತಾರೆ. ಸಸಿಹಿತ್ಲುವಿನಲ್ಲಿ ನಡೆಯುವ ಚಾಂಪಿಯನ್‌ಶಿಪ್‌ನಲ್ಲಿ ಎರಡು ವಿಭಾಗಗಳಿವೆ. ಸಮುದ್ರದ ಮೇಲೆ ನಡೆಯುವ ಸ್ಪ್ರಿಂಟ್ ವಿಭಾಗದಲ್ಲಿ ಏಕಕಾಲದಲ್ಲಿ ರೇಸ್ ಮಾದರಿಯಲ್ಲಿ ಕ್ರೀಡಾಳುಗಳನ್ನು ಬಿಡಲಾಗುತ್ತದೆ, ಅವರು ಸಮುದ್ರದಲ್ಲಿ ನಿಗದಿತ ದೂರಕ್ಕೆ ಹೋಗಿ ತೀರಕ್ಕೆ ಹಿಂದೆ ಬರಬೇಕು. ಮೊದಲು ತಲಪುವವರು ಜಯಶಾಲಿಗಳಾಗುತ್ತಾರೆ. ಇನ್ನೊಂದು ವಿಭಾಗ ಟೆಕ್ನಿಕಲ್. ಇದು ಹಿನ್ನೀರಿನಲ್ಲಿ ನಡೆಯಲಿದ್ದು, ಕೆಲವೊಂದು ಗುರುತಿಸಲಾದ ಅಡೆ ತಡೆಗಳನ್ನು ನಿವಾರಿಸಿಕೊಂಡು ಗುರಿ ತಲಪುವುದು ಇದರ ವಿಧಾನ.
Discover more from Coastal Times Kannada
Subscribe to get the latest posts sent to your email.
Discussion about this post