ಬಂಟ್ವಾಳ, ಜು.13: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಜನತೆಯ ಬಹುದಿನಗಳ ಕನಸಾಗಿದ್ದ ಬಂಟ್ವಾಳ ರೈಲ್ವೆ ನಿಲ್ದಾಣದ ನವೀಕರಣ ಕಾರ್ಯ ಕೊನೆಗೂ ಪೂರ್ಣಗೊಂಡಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಡಿ ಬರೋಬ್ಬರಿ 26.18 ಕೋಟಿ ರೂಪಾಯಿ ವೆಚ್ಚದಲ್ಲಿ ಈ ನಿಲ್ದಾಣವನ್ನು ಅತ್ಯಾಧುನಿಕವಾಗಿ ಮರುನಿರ್ಮಾಣ ಮಾಡಲಾಗಿದ್ದು, ಉದ್ಘಾಟನೆಗೆ ಸಜ್ಜಾಗಿದೆ.
2024ರಲ್ಲಿ ಈ ಯೋಜನೆಗೆ ವರ್ಚುವಲ್ ಆಗಿ ಶಂಕುಸ್ಥಾಪನೆ ನೆರವೇರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಬರುವ ಜುಲೈ 17 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶಕ್ಕೆ ಸಮರ್ಪಿಸಲಿದ್ದಾರೆ. ಕೇಂದ್ರ ಸರ್ಕಾರದ ‘ಅಮೃತ ಭಾರತ ಸ್ಟೇಷನ್ ಸ್ಕೀಮ್’ ಯೋಜನೆಯ ಎರಡನೇ ಹಂತದ ಅಡಿಯಲ್ಲಿ ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಈ ಹೈಟೆಕ್ ಕಾಯಕಲ್ಪ ನೀಡಲಾಗಿದೆ. ನೈಋತ್ಯ ರೈಲ್ವೆ ವಲಯದಲ್ಲಿ ಸಮಗ್ರ ಆಧುನೀಕರಣಕ್ಕೆ ಒಳಪಟ್ಟ ಪ್ರಮುಖ ನಾಲ್ಕು ನಿಲ್ದಾಣಗಳಲ್ಲಿ ಬಂಟ್ವಾಳ ಕೂಡ ಒಂದಾಗಿದೆ. ಈ ಯೋಜನೆಯು ನಿಲ್ದಾಣವನ್ನು ಕೇವಲ ಸುಂದರಗೊಳಿಸದೆ, ಪ್ರಯಾಣಿಕರ ಸುರಕ್ಷತೆ ಮತ್ತು ಅತ್ಯಾಧುನಿಕ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಿದೆ.

ಮರುನಿರ್ಮಾಣಗೊಂಡ ಬಂಟ್ವಾಳ ರೈಲ್ವೆ ನಿಲ್ದಾಣವು ಈಗ ಸಂಪೂರ್ಣ ಆಧುನಿಕ ಮತ್ತು ಪ್ರಯಾಣಿಕ ಸ್ನೇಹಿ ಸಾರಿಗೆ ಕೇಂದ್ರವಾಗಿ ಬದಲಾಗಿದೆ. ರೈಲಿಗೆ ಕಾಯುವ ಪ್ರಯಾಣಿಕರಿಗಾಗಿ ಸುಸಜ್ಜಿತ ಹಾಗೂ ವಿಶಾಲವಾದ ವೇಟಿಂಗ್ ಹಾಲ್‌ಗಳು ಮತ್ತು ನವಿಕರಿಸಿದ ಟಿಕೆಟ್ ಬುಕಿಂಗ್ ಕೌಂಟರ್‌ಗಳನ್ನು ನಿರ್ಮಿಸಲಾಗಿದೆ. ನಿಲ್ದಾಣದ ಮುಂಭಾಗದ ಆವರಣವನ್ನು ಅಭಿವೃದ್ಧಿಪಡಿಸಲಾಗಿದ್ದು, ವಾಹನಗಳು ಬಂದು ಹೋಗಲು ಪ್ರತ್ಯೇಕ ವಲಯಗಳನ್ನು ನಿರ್ಮಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಬಿಸಿಲು-ಮಳೆಯಿಂದ ರಕ್ಷಣೆ ಪಡೆಯಲು ಪ್ಲಾಟ್‌ಫಾರ್ಮ್‌ಗಳಿಗೆ ಪೂರ್ಣ ಪ್ರಮಾಣದ ಮೇಲ್ಛಾವಣಿ ಹಾಗೂ ಅತ್ಯುತ್ತಮ ನೆಲಹಾಸನ್ನು ಅಳವಡಿಸಲಾಗಿದೆ. ಕರಾವಳಿಯ ಸಾಂಸ್ಕೃತಿಕ ಸೊಗಡನ್ನು ಬಿಂಬಿಸುವಂತಹ ಆಕರ್ಷಕ ಪ್ರವೇಶ ಮತ್ತು ನಿರ್ಗಮನ ಕಮಾನುಗಳನ್ನು ನಿರ್ಮಿಸಲಾಗಿದೆ.
ಪ್ರಯಾಣಿಕರ ಸುಲಭ ಸಂಚಾರ ಮತ್ತು ನಿಖರ ಮಾಹಿತಿ ವಿನಿಮಯಕ್ಕಾಗಿ ನಿಲ್ದಾಣದಲ್ಲಿ ಈ ಕೆಳಗಿನ ಡಿಜಿಟಲ್ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಉನ್ನತ ಗುಣಮಟ್ಟದ ಎಲ್‌ಇಡಿ ದೀಪಗಳು ಮತ್ತು ನಿಲ್ದಾಣದ ನಯನಮನೋಹರ ಮುಂಭಾಗದ ಲೈಟಿಂಗ್, ರೈಲು ಬರುವಿಕೆ ಮತ್ತು ಬೋಗಿಗಳ ಸ್ಥಾನವನ್ನು ತಿಳಿಸುವ ಡಿಜಿಟಲ್ ಕೋಚ್ ಇಂಡಿಕೇಶನ್ ಬೋರ್ಡ್‌ಗಳು, ಅತ್ಯಾಧುನಿಕ ಧ್ವನಿವರ್ಧಕ ವ್ಯವಸ್ಥೆ ಮತ್ತು ವಿಶಾಲವಾದ ಗಡಿಯಾರಗಳು, ಆಕರ್ಷಕ ಗಾರ್ಡನ್ ಹಾಗೂ ಲ್ಯಾಂಡ್‌ಸ್ಕೇಪಿಂಗ್ ಮೂಲಕ ನಿಲ್ದಾಣದ ಸುತ್ತಮುತ್ತ ಹಸಿರಿನಿಂದ ತುಂಬಿಕೊಂಡಿದೆ.

Discover more from Coastal Times Kannada
Subscribe to get the latest posts sent to your email.







Discussion about this post