ಮಂಗಳೂರು: ಕರ್ನಾಟಕದಲ್ಲಿ ತಂಬಾಕು ಹಾಗೂ ನಿಕೋಟಿನ್ ಅಂಶವುಳ್ಳ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ಇತರ ನಿಷೇಧಿತ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಾಟ ಮತ್ತು ಮಾರಾಟವನ್ನು ನಿಷೇಧಿಸಿ ರಾಜ್ಯ ಸರ್ಕಾರ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಬುಧವಾರ ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ, ಅಡಿಕೆ ಬೆಳೆಗಾರರ ಹಾಗೂ ಕಾನೂನುಬದ್ಧ ಅಡಿಕೆ ವ್ಯಾಪಾರಿಗಳ ಹಿತಾಸಕ್ತಿ ಕಾಯುವಂತೆ ದಿ ಸೆಂಟ್ರಲ್ ಅರೆಕನಟ್ ಆ್ಯಂಡ್ ಕೊಕೋ ಮಾರ್ಕೆಟಿಂಗ್ ಆ್ಯಂಡ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೋ) ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಎ.ಎಲ್.ಆರ್.ಸತೀಶ್ಚಂದ್ರ ಅವರು, ಸರ್ಕಾರದ ನಿಷೇಧದ ಆದೇಶ ಜಾರಿಯಲ್ಲಿ ಸ್ಪಷ್ಟ ಚೌಕಟ್ಟನ್ನು ರಚಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಾರ್ವಜನಿಕ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ನಿಷೇಧದ ಕ್ರಮವನ್ನು ಕ್ಯಾಂಪ್ಕೋ ಗೌರವಿಸುತ್ತದೆ ಹಾಗೂ ಬೆಂಬಲಿಸುತ್ತದೆ. ಆದರೆ ಈ ನಿಷೇಧದ ನೆಪದಲ್ಲಿ ಅಡಿಕೆ ಬೆಳೆಗಾರರು ಹಾಗೂ ಕಾನೂನುಬದ್ಧ ಅಡಿಕೆ ವ್ಯಾಪಾರದ ಹಿತಾಸಕ್ತಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಜಾಗ್ರತೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಡಿಕೆಯು ಕರ್ನಾಟಕ ಹಾಗೂ ದೇಶದ ಲಕ್ಷಾಂತರ ರೈತ ಕುಟುಂಬಗಳ ಜೀವನಾಧಾರವಾಗಿರುವ ಪ್ರಮುಖ ತೋಟಗಾರಿಕಾ ಬೆಳೆ. ಅಡಿಕೆಯನ್ನು ಕೃಷಿ ಉತ್ಪನ್ನವಾಗಿ ಪರಿಗಣಿಸಬೇಕು ಹಾಗೂ ಇದನ್ನು ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ನಿಷೇಧಿತ ಉತ್ಪನ್ನಗಳೊಂದಿಗೆ ಸೇರಿಸಿ ಗೊಂದಲ ಸೃಷ್ಟಿಸಬಾರದು. ಸರ್ಕಾರದ ಈ ನಿಷೇಧ ಕೇವಲ ನಿಕೋಟಿನ್/ತಂಬಾಕು ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿರಬೇಕೇ ಹೊರತು, ಅಡಿಕೆ ಬೆಳೆಗಾರರಿಗಾಗಲಿ ಅಥವಾ ಕಾನೂನುಬದ್ಧ ಅಡಿಕೆ ವ್ಯಾಪಾರಕ್ಕಾಗಲಿ ಇದರಿಂದ ಯಾವುದೇ ಅನಗತ್ಯ ತೊಂದರೆಯಾಗಬಾರದು ಎಂದು ಅವರು ತಿಳಿಸಿದ್ದಾರೆ.
ಅಡಿಕೆ ವಲಯವು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ನೀಡುತ್ತಿರುವ ಜಿಎಸ್‌ಟಿ (ಜಿಎಸ್‌ಟಿ) ತೆರಿಗೆ ಆದಾಯದ ಅಂಕಿಅಂಶಗಳನ್ನು ಕ್ಯಾಂಪ್ಕೋ ಈ ಸಂದರ್ಭದಲ್ಲಿ ಹಂಚಿಕೊಂಡಿದೆ. ಇತ್ತೀಚೆಗೆ ಲೋಕಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರ ಪ್ರಶ್ನೆಗೆ ಕೇಂದ್ರ ಹಣಕಾಸು ರಾಜ್ಯ ಸಚಿವರಾದ ಪಂಕಜ್ ಚೌಧರಿ ಅವರು ನೀಡಿದ ಉತ್ತರದಂತೆ, ಕರ್ನಾಟಕವೇ ದೇಶದಲ್ಲಿ ಅತಿ ಹೆಚ್ಚು ಅಡಿಕೆ ಜಿಎಸ್‌ಟಿ ಸಂಗ್ರಹಿಸುವ ರಾಜ್ಯವಾಗಿದೆ.
ತಂಬಾಕು ನಿಷೇಧದ ಕಾರ್ಯಾಚರಣೆಯ ಸಮಯದಲ್ಲಿ ಕಾನೂನುಬದ್ಧ ಅಡಿಕೆ ವ್ಯಾಪಾರ ಅಥವಾ ಬೆಳೆಗಾರರ ಜೀವನೋಪಾಯದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ಅತ್ಯಗತ್ಯ ಎಂದು ಕ್ಯಾಂಪ್ಕೋ ಅಧ್ಯಕ್ಷ ಎ.ಎಲ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ.
ಅಡಿಕೆಯ ಬೆಳವಣಿಗೆ, ಸಂಗ್ರಹಣೆ, ಸಂಸ್ಕರಣೆ ಹಾಗೂ ವ್ಯಾಪಾರದ ಮೇಲೆ ಯಾವುದೇ ಪರೋಕ್ಷ ಕಿರುಕುಳ ಅಥವಾ ನಿಯಂತ್ರಣದ ವಾತಾವರಣ ನಿರ್ಮಾಣವಾಗದಂತೆ ನಿಷೇಧದ ಆದೇಶದಲ್ಲಿ ಸ್ಪಷ್ಟತೆ ಇರಬೇಕು. ಜಾರಿಗೊಳಿಸುವ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು. ಅಧಿಕಾರಿಗಳು ನಿಷೇಧದ ಅನುಷ್ಠಾನ ಮಾಡುವಾಗ ಕಾನೂನುಬದ್ಧ ವ್ಯಾಪಾರಿಗಳಿಗೆ ಮತ್ತು ರೈತರಿಗೆ ಅನಗತ್ಯ ಗೊಂದಲ, ತೊಂದರೆಗಳು ಎದುರಾಗದಂತೆ ನಿಷ್ಪಕ್ಷಪಾತ ಹಾಗೂ ಸ್ಪಷ್ಟ ನಿಯಮಾವಳಿಗಳನ್ನು ರೂಪಿಸಬೇಕೆಂದು ಕ್ಯಾಂಪ್ಕೋ ಆಡಳಿತ ಮಂಡಳಿ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.







Discussion about this post