ಬಂಟ್ವಾಳ: ಬಿಸಿಯೂಟದ ಕಾರ್ಮಿಕ ಮಹಿಳೆಯೊಬ್ಬರು ಕರ್ತವ್ಯ ನಿರ್ವಹಿಸುವ ವೇಳೆ ಅವರ ಕೈಬೆರಳು ಇಲೆಕ್ಟ್ರಿಕ್ ತುರಿಮಣೆಗೆ ಸಿಲುಕಿ ಅಪಾಯಕ್ಕೀಡಾದ ಪರಿಸ್ಥಿತಿ ಬಂದಾಗ ಸಮಯಪ್ರಜ್ಞೆ ಮೆರೆದ ವಿದ್ಯಾರ್ಥಿಯೋರ್ವ ಕೂಡಲೇ ಸ್ವಿಚ್ ಆಫ್ ಮಾಡಿ, ಆಗಬಹುದಾಗಿದ್ದ ಅಪಾಯವನ್ನು ತಪ್ಪಿಸಿದ್ದಾನೆ. ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಅವಘಡ ನಡೆಯುವ ಆತಂಕವನ್ನು ಗಮನಿಸಿ ಸಮಯಪ್ರಜ್ಞೆ ಮೆರೆದು ಅಪಾಯ ತಪ್ಪಿಸಿದ ಈ ಘಟನೆ ಪ್ರಶಂಸೆಗೆ ಪಾತ್ರವಾಗಿದೆ. ಐದನೇ ತರಗತಿ ಬಾಲಕ ಮನ್ವಿತ್ ಮಾಡಿದ ಈ ಕೆಲಸಕ್ಕೆ ಪ್ರತಿಕ್ರಿಯಿಸಿರುವ ಬಿಸಿಯೂಟ ಕಾರ್ಮಿಕ ಮಹಿಳೆ, ”ದೇವರೇ ಬಂದು ರಕ್ಷಿಸಿದಂತಾಗಿದೆ” ಎಂದಿದ್ದಾರೆ.
ಶಾಲೆಯ ಅಕ್ಷರ ದಾಸೋಹದ ಸಿಬ್ಬಂದಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಚಾಲಿತ ತುರಿಮಣೆಯಲ್ಲಿ ಆಕಸ್ಮಿಕವಾಗಿ ಅವರ ಕೈಬೆರಳು ಸಿಕ್ಕಿಕೊಂಡಿತ್ತು. ಕೂಡಲೇ ಅವರು ಕಿರುಚಿದ್ದು, ಈ ವೇಳೆ ಸ್ಥಳದಲ್ಲಿದ್ದ ಐದನೇ ತರಗತಿಯ ಬಾಲಕ ಮನ್ವಿತ್, ಇದನ್ನು ಗಮಿಸಿ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮತ್ತಷ್ಟು ಅನಾಹುತವನ್ನು ತಪ್ಪಿಸಿದ್ದಾನೆ.
ಸ್ವಯಂ ನಿರ್ಧಾರದಿಂದ ಸಮಯಪ್ರಜ್ಞೆ ಮೆರೆದ ಬಾಲಕನ ಧೈರ್ಯವನ್ನು ಶಾಲಾ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್ ಮತ್ತು ಸದಸ್ಯರು ಶ್ಲಾಘಿಸಿದ್ದಾರೆ. ಶಾಲೆಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ್, ಸಿಆರ್ ಪಿ ಜ್ಯೋತಿ ಭೇಟಿ ನೀಡಿ ಬಾಲಕನ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದರು
ವಿದ್ಯಾರ್ಥಿ ಮನ್ವಿತ್ ಈ ಸಂದರ್ಭ ಮಾತನಾಡಿ, ”ನಾನು ಶೌಚಾಲಯಕ್ಕೆಂದು ತೆರಳುತ್ತಿದ್ದೆ. ಈ ವೇಳೆ ಏನೋ ಒಂದು ಶಬ್ಧ ಕೇಳಿಸಿತು. ಅಡುಗೆ ಮಾಡುವ ಸಿಬ್ಬಂದಿ ಬೊಬ್ಬೆ ಹಾಕುತ್ತಿರುವ ಸದ್ದು ಕೇಳಿಸಿತು. ಕೂಡಲೇ ನಾನು ತುರಿಮಣೆಗೆ ಸಂಪರ್ಕ ಕಲ್ಪಿಸಿದ್ದ ಸ್ವಿಚ್ ಆಫ್ ಮಾಡಿದೆ. ನಂತರ ಶಿಕ್ಷಕರ ಬಳಿ ತಿಳಿಸಿದೆ” ಎಂದು ಹೇಳಿದನು.
”ನಾನು ಅಡುಗೆ ಮಾಡುವ ವೇಳೆ ಕಾಯಿ ತುರಿಯುವ ವೇಳೆ ಬೆರಳು ಸಿಲುಕಿಕೊಂಡಿತ್ತು. ಈ ಸಂದರ್ಭದಲ್ಲಿ ಹುಡುಗ ದೇವರಂತೆ ಬಂದು ಕಾಪಾಡಿದ” ಎಂದು ಬಿಸಿಯೂಟದ ಸಿಬ್ಬಂದಿಯು ವಿದ್ಯಾರ್ಥಿ ಮನ್ವಿತ್‌ನ ಕಾರ್ಯಕ್ಕೆ ಕೃತಜ್ಞತೆ ತಿಳಿಸಿದ್ದಾರೆ.
ವಿದ್ಯಾರ್ಥಿ ಮನ್ವಿತ್ ಸಾಹಸಕ್ಕೆ ಸಿಎಂ ಡಿಕೆ ಶಿವಕುಮಾರ್ ಮೆಚ್ಚುಗೆ : ಇನ್ನು ವಿದ್ಯಾರ್ಥಿ ಮನ್ವಿತ್ ಸಾಹಸಕ್ಕೆ ಸಿಎಂ ಡಿಕೆ ಶಿವಕುಮಾರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್‌ನ ಸಮಯಪ್ರಜ್ಞೆ ಹಾಗೂ ಧೈರ್ಯ ನಿಜಕ್ಕೂ ಹೃದಯಸ್ಪರ್ಶಿ ಮತ್ತು ಶ್ಲಾಘನೀಯ. ಅಡುಗೆ ಸಿಬ್ಬಂದಿಯನ್ನು ಅಪಾಯದಿಂದ ಕಾಪಾಡಿದ ಮನ್ವಿತ್‌ಗೆ ಹೃದಯಪೂರ್ವಕ ಅಭಿನಂದನೆಗಳು’ ಎಂದಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post