ಮಂಗಳೂರು, ಆ.14: ಬಹುಕೋಟಿ ವಂಚನೆ ಪ್ರಕರಣದಲ್ಲಿ ಬೆಳಗಾವಿಯ ಶಿವಾನಂದ ಸಿದ್ದಪ್ಪ ನೀಲಣ್ಣವರ್ ನನ್ನು ಮಂಗಳೂರು ವಿಭಾಗದ ಇಡಿ ಅಧಿಕಾರಿಗಳು ಬಂಧಿಸಿದ್ದು, ಕೋರ್ಟಿಗೆ ಹಾಜರುಪಡಿಸಿ 12 ದಿನಗಳ ಕಸ್ಟಡಿ ಪಡೆದಿದ್ದಾರೆ.
ಆರೋಪಿಯನ್ನು ಆ.13ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬೆಳಗಾವಿಯಲ್ಲಿ ಬಂಧಿಸಿ, ಮಂಗಳೂರಿನ ಪಿಎಂಎಲ್‌ಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ಆ.24ರವರೆಗೆ ಈಡಿ ವಶಕ್ಕೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ.
ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಶಿವಾನಂದ್ ನೀಲಣ್ಣನವರ್ ವಿರುದ್ಧ 2019ರ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ (ಪಿಎಂಎಲ್‌ಎ) ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿ ದಾರರ ಹಿತಾಸಕ್ತಿ ಸಂರಕ್ಷಣ ಕಾಯ್ದೆ-2004ರಡಿ ಪ್ರಕರಣ ದಾಖಲಾಗಿತ್ತು. ಅದರಂತೆ ತನಿಖೆ ಆರಂಭಿಸಿದ ಈಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಶಿವಂ ಅಸೋಸಿಯೇಟ್ಸ್ ಸಂಸ್ಥೆಯು ಕರ್ನಾಟಕ, ಮಹಾರಾಷ್ಟ್ರ, ಗೋವಾ, ಛತ್ತೀಸ್‌ಗಢ ಸಹಿತ ಹಲವು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿತ್ತು ಎಂಬುದನ್ನು ಪತ್ತೆ ಹಚ್ಚಿರುವ ಜಾರಿ ನಿರ್ದೇಶನಾಲಯವು ಈ ಸಂಸ್ಥೆಯು ಏಜೆಂಟರ ಮೂಲಕ ಸಾರ್ವಜನಿಕರಿಂದ ಅಕ್ರಮವಾಗಿ 2,110.97 ಕೋಟಿ ರೂ. ಸಂಗ್ರಹಿಸಿದೆ. ಹೂಡಿಕೆ ಮಾಡಿದ ಹಣಕ್ಕೆ ಪ್ರತಿ ತಿಂಗಳು ಶೇ.3ರಷ್ಟು ಲಾಭ ನೀಡುವುದಾಗಿ ಸಂಸ್ಥೆ ಭರವಸೆ ನೀಡಿತ್ತು. ಅಲ್ಲದೆ ಹೂಡಿಕೆದಾರರನ್ನು ಆಕರ್ಷಿಸಲು ಮಧ್ಯವರ್ತಿ ಗಳಿಗೆ ಶೇ.0.5ರಷ್ಟು ಕಮಿಷನ್ ನೀಡುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಿಎಂಎಲ್‌ಎ ಕಾಯ್ದೆಯಡಿ ನಡೆಸಿದ ತನಿಖೆಯಲ್ಲಿ ಹೂಡಿಕೆದಾರರಿಂದ 2,110.97 ಕೋಟಿ ರೂ. ಸಂಗ್ರಹಿಸಿದ್ದರೂ, ಅದರ ಒಂದು ಭಾಗದಷ್ಟನ್ನು ಮಾತ್ರ ಹೂಡಿಕೆದಾರರಿಗೆ ಮರುಪಾವತಿಸಿರುವುದು ಬೆಳಕಿಗೆ ಬಂದಿದೆ. 2019ರಿಂದ ಸಂಸ್ಥೆಯು ಷೇರು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ನಷ್ಟ ಅನುಭವಿಸಿರುವುದು ಕೂಡ ತನಿಖೆಯಲ್ಲಿ ಪತ್ತೆಯಾ ಗಿದೆ. ಆದರೂ ಕೂಡ ಇದನ್ನು ಮರೆಮಾಚಿ ಮಾರುಕಟ್ಟೆಯಲ್ಲಿ ಸಂಸ್ಥೆಯ ಮೇಲಿನ ವಿಶ್ವಾಸವನ್ನು ಉಳಿಸಿಕೊಳ್ಳುವ ಉದ್ದೇಶದಿಂದ, ಹೊಸ ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಹಿಂದಿನ ಹೂಡಿಕೆದಾರರಿಗೆ ನೀಡಬೇಕಿದ್ದ ಬಡ್ಡಿ ಪಾವತಿಗೆ ನೇರವಾಗಿ ವರ್ಗಾಯಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಸ್ಥೆಯು ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ವಿವಿಧ ವೈಯಕ್ತಿಕ ಬ್ಯಾಂಕ್ ಖಾತೆಗಳು, ಕುಟುಂಬ ಸದಸ್ಯರ ಖಾತೆಗಳು, ಶಿವಂ ಸೇವಾ (ಒಪಿಸಿ) ಪ್ರೈ.ಲಿ. ಮತ್ತು ಶಿವಂ ಪ್ರೊಡಕ್ಷನ್ಸ್ ಸಹಿತ ಇತರ ಸಂಸ್ಥೆಗಳ ಮೂಲಕ ಹಣವನ್ನು ವರ್ಗಾವಣೆ ಮಾಡಿ ಬಳಕೆ ಮಾಡಲಾಗುತ್ತಿತ್ತು. ಅಲ್ಲದೆ ಐಷಾರಾಮಿ ವಾಹನಗಳ ಖರೀದಿ, ದುಬಾರಿ ಬಂಗಲೆಗಳ ನಿರ್ಮಾಣ, ಬೇನಾಮಿ ಪಾಲುದಾರರ ಹೆಸರಿನಲ್ಲಿ ಆಸ್ತಿಗಳ ಖರೀದಿಗೂ ಬಳಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಈಡಿ ಪ್ರಕಟನೆಯಲ್ಲಿ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.







Discussion about this post