ಮಂಗಳೂರು, ಸೆ.13: ಮಂಗಳೂರು: ತಲೆಗೆ ಪೆಟ್ಟು ಬಿದ್ದು ನಗರದ ಯೇನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಸೋಮವಾರ ನಿಧನರಾದರು. ಸೆ.15ರಂದು ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಂಸದ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.
ಯೇನಪೋಯ ಆಸ್ಪತ್ರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವಿನಯ ಕುಮಾರ್ ಸೊರಕೆ ಮತ್ತು ಮಾಜಿ ಸಚಿವ ರಮಾನಾಥ ರೈ, ಆಸ್ಕರ್ ಅಂತ್ಯಸಂಸ್ಕಾರ ಮತ್ತು ಅಂತಿಮ ದರ್ಶನಕ್ಕೆ ಏನೆಲ್ಲಾ ವ್ಯವಸ್ಥೆ ಮಾಡಲಾಗಿದೆ ಎನ್ನುವ ವಿವರ ನೀಡಿದರು. ಆಸ್ಕರ್ ದೇಹವನ್ನು ಯೇನಪೋಯ ಆಸ್ಪತ್ರೆಯಿಂದ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ ಶವಾಗಾರಕ್ಕೆ ಒಯ್ಯಲಾಗಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಅಂತಿಮ ದರ್ಶನ ಪಡೆದಿದ್ದಾರೆ. ಇಂದು ರಾತ್ರಿ ಪಾರ್ಥಿವ ಶರೀರವನ್ನು ಅಲ್ಲಿಯೇ ಇರಿಸಲಾಗುವುದು. ನಾಳೆ ಬೆಳಗ್ಗೆ 8.30ಕ್ಕೆ ಉಡುಪಿಗೆ ಒಯ್ದು ಅಲ್ಲಿನ ಮದರ್ ಆಫ್ ಸೋರೋಸ್ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದು. ಒಂದು ಗಂಟೆ ಕಾಲ ಪ್ರಾರ್ಥನೆ ಮತ್ತು ಪೂಜೆ ನಡೆಯುತ್ತದೆ. ಆನಂತರ ಉಡುಪಿಯ ಕಾಂಗ್ರೆಸ್ ಕಚೇರಿಯಲ್ಲಿ ಮಧ್ಯಾಹ್ನ ಒಂದು ಗಂಟೆ ವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಬಳಿಕ ಮಧ್ಯಾಹ್ನ 2.30ಕ್ಕೆ ಪಾರ್ಥಿವ ಶರೀರವನ್ನು ಮಂಗಳೂರಿನ ಕಾಂಗ್ರೆಸ್ ಜಿಲ್ಲಾ ಕಚೇರಿಗೆ ತರಲಾಗುವುದು.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ 3.30ರಿಂದ ಸಂಜೆ 5.30ರ ವರೆಗೆ ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಆಸ್ಕರ್ ಅಂತಿಮ ದರ್ಶನಕ್ಕಿರಿಸಲಾಗುವುದು.
ನಾಳೆ ಸಂಜೆ ಮತ್ತೆ ಫಾದರ್ ಮುಲ್ಲರ್ ಆಸ್ಪತ್ರೆಯ ಶವಾಗಾರದಲ್ಲಿ ದೇಹವನ್ನು ಇರಿಸಲಿದ್ದು, ಸೆ.15ರಂದು ಬೆಳಗ್ಗೆ 9.30ಕ್ಕೆ ಮಂಗಳೂರಿನ ಮಿಲಾಗ್ರಿಸ್ ಚರ್ಚ್ ನಲ್ಲಿ ವಿಶೇಷ ಪೂಜೆ ನಡೆಸಲಾಗುವುದು. ಆನಂತರ ಆಸ್ಕರ್ ಆಸ್ಕರ್ ಪಾರ್ಥಿವ ಶರೀರವನ್ನು ಮಂಗಳೂರಿನಿಂದ ಬೆಂಗಳೂರಿಗೆ ಒಯ್ಯಲಿದ್ದು, ಮಧ್ಯಾಹ್ನ ಬೆಂಗಳೂರಿನ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಅಂತಿಮ ದರ್ಶನದ ನಂತರ ಬೆಂಗಳೂರಿನ ಸೈಂಟ್ ಪ್ಯಾಟ್ರಿಕ್ ಚರ್ಚ್ ನಲ್ಲಿ ಅಂದು ಸಂಜೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುವ ಅಂತಿಮ ದರ್ಶನ ಮತ್ತು ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರ ಮಟ್ಟದ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.