ಮಂಗಳೂರು: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸಿದ (ಚಾರ್ಟರ್ಡ್ ಅಕೌಂಟೆಂಟ್) ಪರೀಕ್ಷೆಯಲ್ಲಿ ಮಂಗಳೂರಿನ ರೂತ್ ಕ್ಲಾರಾ ಡಿಸಿಲ್ವಾ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಸೋಮವಾರ ಫಲಿತಾಂಶ ಪ್ರಕಟಗೊಂಡಿದೆ.
ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಇನ್ ಸ್ಟಿಟ್ಯೂಟ್ ವತಿಯಿಂದ 2021ರ ಸಾಲಿನ ಸಿಎ ಅಂತಿಮ ಪರೀಕ್ಷೆಯನ್ನು ನಡೆಸಲಾಗಿತ್ತು. ಇದರ ಫಲಿತಾಂಶ ಸೆ.13ರಂದು ಬಂದಿದ್ದು, ಮಂಗಳೂರು ಮೂಲದ ರೂತ್ ಕ್ಲಾರಾ ಡಿಸಿಲ್ವಾ ಆಲ್ ಇಂಡಿಯಾ ಲೆವಲಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ.ಮಾಳವಿಕಾ ಆರ್. ಕೃಷ್ಣನ್ ಎರಡನೇ ರ್ಯಾಂಕ್ ಪಡೆದಿದ್ದಾರೆ. ಹೊಸ ಕೋರ್ಸ್ನಲ್ಲಿ ನಂದಿನಿ ಅಗರ್ವಾಲ್ ಮೊದಲ ರ್ಯಾಂಕ್, ಸಾಕ್ಷಿ ಐರಾನ್ ಎರಡನೇ ರ್ಯಾಂಕ್, ಬೆಂಗಳೂರಿನ ಬಗ್ರೇಚ ಸಾಕ್ಷಿ ರಾಜೇಂದ್ರ 3ನೇ ರ್ಯಾಂಕ್ ಗಳಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ರಬಕವಿಯ ಲಕ್ಷ್ಮೀ ಸೊಲ್ಲಾಪುರ ಕೂಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 46,139 ಮಂದಿ ಹಳೆಯ ಕೋರ್ಸ್ ಮತ್ತು 83,606 ಅಭ್ಯರ್ಥಿಗಳು ಹೊಸ ಕೋರ್ಸ್ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. 82,839 ಮಂದಿ ಫೌಂಡೇಷನ್ ಕೋರ್ಸ್ ಬರೆದಿದ್ದರು. ಅಂತಿಮ ಪರೀಕ್ಷೆಯು ಜುಲೈ 5ರಿಂದ 19ರವರೆಗೆ ನಡೆದಿತ್ತು.
ಕರಾವಳಿ ಬೆಡಗಿ ಸಾಧನೆ: ರೂತ್ ಕ್ಲಾರಾ ಡಿಸಿಲ್ವಾ ಕರಾವಳಿ ಭಾಗದಿಂದ ಸಿಎ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಮೊದಲ ವಿದ್ಯಾರ್ಥಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇವರು ಮಂಗಳೂರು ಬಲ್ಮಠದ ಸಿಎ ವಿವಿಯನ್ ಪಿಂಟೋ ಆಂಡ್ ಕಂಪನಿಯಲ್ಲಿ ಆರ್ಟಿಕಲ್ಶಿಪ್ ಪೂರ್ಣಗೊಳಿಸಿದ್ದರು. ರೂತ್ ತುಂಬಾ ಬುದ್ಧಿವಂತ ಹುಡುಗಿ. ಆಕೆ ಸಾಮರ್ಥ್ಯದ ಬಗೆಗೆ ಇರುವ ವಿಶ್ವಾಸವೇ ಆಕೆಯ ಬಲ. ಕೆಲಸದ ಮೌಲ್ಯಗಳ ಬಗ್ಗೆ ನಾವೂ ಪ್ರಭಾವಿತವಾಗಿದ್ದೇವೆ ಎಂದು ವಿವಿಯನ್ ಪ್ರತಿಕ್ರಿಯಿಸಿದ್ದಾರೆ. ರೂತ್ ಇತಿಹಾಸ ನಿರ್ವಿುಸಿದ್ದಾರೆ. ಗುರಿಯೆಡೆಗೆ ಸಾಗುವ ಬದ್ಧತೆಯಲ್ಲಿ ರಾಜಿ ಮಾಡಿಕೊಳ್ಳದಿದ್ದರೆ ಗೆಲುವು ನಿಶ್ಚಿತ ಎನ್ನುವುದಕ್ಕೆ ರೂತ್ ಕ್ಲಾರಾ ಅತ್ಯುತ್ತಮ ಉದಾಹರಣೆಯಾಗಿದ್ದಾರೆ ಎಂದು ಆಕೆಯ ಗುರು, ಸೆಂಟರ್ ಫಾರ್ ಇಂಟೆಗ್ರೇಟೆಡ್ ಲರ್ನಿಂಗ್(ಸಿಐಎಲ್) ಕನ್ವೀನರ್ ನಂದಗೋಪಾಲ್ ಹರ್ಷ ವ್ಯಕ್ತಪಡಿಸಿದ್ದಾರೆ.