ಕೇರಳ: ಇತ್ತೀಚೆಗೆ ಕೇರಳದ ವಿವಿಧ ಕಾಲೇಜುಗಳಲ್ಲಿ ರ‍್ಯಾಗಿಂಗ್ ಚಟುವಟಿಕೆ ಹೆಚ್ಚಿತ್ತಿರುವುದು ಆತಂಕ ಸೃಷ್ಟಿಸುತ್ತಿದೆ. ಇದೀಗ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕೊಟ್ಟಾಯಂ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಅಮಾನುಷವಾಗಿ ಸುಮಾರು ಮೂರು ತಿಂಗಳ ಕಾಲ ರ‍್ಯಾಗಿಂಗ್‌ಗೆ ಒಳಗಾಗಿದ್ದಾರೆ. ಎರಡನೇ ವರ್ಷದ ಸಾಮಾನ್ಯ ನರ್ಸಿಂಗ್ ವಿದ್ಯಾರ್ಥಿಗಳಾದ ಸ್ಯಾಮ್ಯುಯೆಲ್ ಜಾನ್ಸನ್ (20), ಎನ್.ಎನ್.ಜೀವಾ (19) ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳಾದ ರಾಹುಲ್ ರಾಜ್ ಕೆ.ಪಿ (22), ಸಿ.ರಿಜಿಲ್ಟಿತ್ (21), ವಿವೇಕ್ ಎನ್ವಿ (21) ಬಂಧಿತ ವಿದ್ಯಾರ್ಥಿಗಳು.
ಕೊಟ್ಟಾಯಂ ಸರ್ಕಾರಿ ನರ್ಸಿಂಗ್ ಕಾಲೇಜಿನ ಮೂರನೇ ವರ್ಷದ ಐವರು ವಿದ್ಯಾರ್ಥಿಗಳು ರ‍್ಯಾಗಿಂಗ್ ನೆಪದಲ್ಲಿ ಪ್ರಥಮ ವರ್ಷದ ಮೂವರು ವಿದ್ಯಾರ್ಥಿಗಳನ್ನು ಭೀಕರವಾಗಿ ಹಿಂಸಿಸಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಆರೋಪದ ಮೇಲೆ ತಪ್ಪಿತಸ್ಥ ವಿದ್ಯಾರ್ಥಿಗಳ ಬಂಧನವಾಗಿದೆ. ಕಳೆದ ವರ್ಷ ನವೆಂಬರ್‌ನಿಂದ ನಿರಂತರವಾಗಿ ರ‍್ಯಾಗಿಂಗ್‌ಗೆ ಒಳಗಾಗಿರುವುದಾಗಿ ತಿರುವನಂತಪುರಂ ಮೂಲದ ಜೂನಿಯರ್ ವಿದ್ಯಾರ್ಥಿಗಳು ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಆರೋಪಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ, 2011ರ ಅಂಟಿ-ರ‍್ಯಾಗಿಂಗ್ ಕಾಯ್ದೆಯಡಿ ಬಂಧಿಸಲಾಗಿದೆ.
ಖಾಸಗಿ ಅಂಗಕ್ಕೆ ಡಂಬಲ್ಸ್ ನೇತು ಹಾಕಿ ಹಿಂಸೆ! : ‘ಜೂನಿಯರ್ ವಿದ್ಯಾರ್ಥಿಗಳಿಗೆ ಬೆತ್ತಲೆಯಾಗಿ ನಿಲ್ಲುವಂತೆ ಒತ್ತಾಯಿಸಿ, ಅವರ ಖಾಸಗಿ ಅಂಗಗಳಿಗೆ ಡಂಬಲ್ಸ್‌ಗಳನ್ನು ನೇತು ಹಾಕಲಾಗುತ್ತಿತ್ತು’ ಎಂದು ಗಾಂಧಿ ನಗರ ಪೊಲೀಸರು ತಿಳಿಸಿದ್ದಾರೆ. ಜೊತೆಗೆ ‘ಜ್ಯಾಮಿಟ್ರಿ ಬಾಕ್ಸ್ ಕಂಪಾಸ್‌ನಲ್ಲಿದ್ದ ಚೂಪಾದ ವಸ್ತುಗಳಿಂದ ಗಾಯಗೊಳಿಸಲಾಗುತ್ತಿತ್ತು. ಬಳಿಕ ಗಾಯಗಳಿಗೆ ಲೋಷನ್ ಹಚ್ಚಿ ನೋವುಂಟು ಮಾಡುತ್ತಿದ್ದರು. ಜೂನಿಯರ್ ವಿದ್ಯಾರ್ಥಿಗಳು ನೋವಿನಿಂದ ಕಿರುಚಾಡಿದಾಗ ಬಲವಂತವಾಗಿ ಲೋಷನ್ ಅನ್ನು ಬಾಯಿಗೆ ತುಂಬಿಸುತ್ತಿದ್ದರು. ಈ ಕೃತ್ಯಗಳನ್ನು ವಿಡಿಯೋ ಮಾಡಿಕೊಂಡು, ಯಾರಿಗಾದರೂ ಹೇಳಿದರೆ ಶಿಕ್ಷಣಕ್ಕೆ ತೊಂದರೆ ಕೊಡುವುದಾಗಿ ಬೆದರಿಕೆ ಹಾಕುತ್ತಿದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದಲ್ಲದೆ, ಪ್ರತಿ ಭಾನುವಾರವೂ ಮದ್ಯ ಖರೀದಿಗೆಂದು ಹಣ ಕೇಳುತ್ತಿದ್ದರು. ಹಣ ಕೊಡದೇ ಇದ್ದರೆ ಹಲ್ಲೆ ಮಾಡುತ್ತಿದ್ದರು. ಇದರಿಂದ ರೋಸಿಹೋದ ಒಬ್ಬಾತ ತನ್ನ ಮನೆಯಲ್ಲಿ ತಂದೆಗೆ ಹೇಳಿದ್ದು ಅವರು ಧೈರ್ಯ ಮಾಡಿಸಿ ಪೊಲೀಸರಿಗೆ ದೂರು ನೀಡುವಂತೆ ಮಾಡಿದ್ದಾರೆ. ಇದರಿಂದಾಗಿ ತಡವಾಗಿಯಾದರೂ ಪ್ರಕರಣ ಬೆಳಕಿಗೆ ಬರುವಂತಾಗಿದೆ. ಹೀಗಾಗಿ ಪ್ರಥಮ ವರ್ಷದ ಮೂವರು ಸಂತ್ರಸ್ತ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post