ಬೆಳಗಾವಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಕಮಿಷನ್ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ ಅವರ ಅಂತ್ಯಕ್ರಿಯೆ ತಾಲ್ಲೂಕಿನ ಸ್ವಗ್ರಾಮ ಬಡಸ ಕೆ.ಎಚ್.ನಲ್ಲಿರುವ ಅವರ ಜಮೀನಿನಲ್ಲಿ, ವೀರಶೈವ ಲಿಂಗಾಯತ ಸಂಪ್ರದಾಯದಂತೆ ಗುರುವಾರ ಬೆಳಿಗ್ಗೆ ನಡೆಯಿತು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹಾಗೂ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಅನೇಕರು ಸಂತೋಷ್ ಮೃತದೇಹದ ಅಂತಿಮ ದರ್ಶನ ಪಡೆದರು.
ಉಡುಪಿಯಿಂದ ಸಂತೋಷ್ ಮೃತದೇಹವನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಸಾಗಿಸಲಾಯಿತು. ಮೃತದೇಹ ನೋಡುತ್ತಿದ್ದಂತೆ ಕುಟುಂಬದವರು ಹಾಗೂ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು.
‘ಕುಟುಂಬಕ್ಕೆ ಪರಿಹಾರ ಸಿಗುವವರೆಗೂ ಅಂತ್ಯಕ್ರಿಯೆ ನಡೆಸಬಾರದು’ ಎಂದು ಕೆಲವರು ಮತ್ತು ‘ಅಂತ್ಯಕ್ರಿಯೆ ಜರುಗಲಿ, ನಂತರ ಹೋರಾಡೋಣ’ ಎಂದು ಕೆಲವರು ಹೇಳಿದ್ದರಿಂದ ಗೊಂದಲ ಉಂಟಾಯಿತು. ಬಂಧುಗಳಲ್ಲೇ ಭಿನ್ನ ಅಭಿಪ್ರಾಯಗಳು ವ್ಯಕ್ತವಾದವು. ಕಾಂಗ್ರೆಸ್ ಬೆಂಬಲಿತರಲ್ಲಿ ಕೆಲವರು ಪ್ರತಿಭಟನೆಯನ್ನೂ ನಡೆಸಿದರು. ಇದರ ನಡುವೆಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಬಿಜೆಪಿ ಕಾರ್ಯಕರ್ತರಾಗಲಿ, ಮುಖಂಡರಾಗಲಿ ಪಾಲ್ಗೊಳ್ಳದಿದ್ದಕ್ಕೆ ಕುಟುಂಬದವರಿಂದ ಆಕ್ರೋಶ ವ್ಯಕ್ತವಾಯಿತು. ಮೃತದೇಹಕ್ಕೆ ಕೇಸರಿ ಶಾಲು ಹಾಕಲಾಗಿತ್ತು.