ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗುರುವಾರ ಪ್ರಕಟಿಸಿದ್ದಾರೆ.
‘ಬೆಳಗಾವಿಯ ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾನು ಮಾಡಿರುವ ಕಾಮಗಾರಿಗಳ ಬಿಲ್ ಮಂಜೂರಾತಿಗೆ ಈಶ್ವರಪ್ಪ ಶೇಕಡ 40ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ಆರೋಪ ಮಾಡಿದ್ದ ಸಂತೋಷ್, ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಮಂಗಳವಾರ ಪತ್ತೆಯಾಗಿತ್ತು. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲಿಸಿದ್ದು, ಈಶ್ವರಪ್ಪ ಅವರನ್ನೇ ಮೊದಲ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಅವರ ಆಪ್ತರಾದ ಬಸವರಾಜ್ ಮತ್ತು ರಮೇಶ್ ಇತರ ಆರೋಪಿಗಳು.
ಇಂದು ಸಂಜೆ ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ ಅವರು, ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಉದ್ದೇಶದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ತಪ್ಪು ಮಾಡಿದ್ದರೆ ದೇವರು ನನಗೆ ಶಿಕ್ಷೆ ನೀಡಲಿ. ಎಲ್ಲವನ್ನೂ ಎದುರಿಸಿ ಆರೋಪಮುಕ್ತವಾಗಿ ಹೊರ ಬರುತ್ತೇನೆ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ.
ನಾನು ದೇವರನ್ನು ನಂಬಿದ್ದೇನೆ.. 40% ಕಮಿಷನ್ ಆರೋಪದಿಂದ ಮುಕ್ತನಾಗಿ ಶೀಘ್ರವಾಗಿ ಹೊರಬರುತ್ತೇನೆ. ತನಿಖೆಗೆ ನನ್ನ ಸಂಪೂರ್ಣ ಸಹಕಾರ ಇರುತ್ತದೆ. ಸಚಿವನಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಕೇಂದ್ರ ಹಾಗೂ ರಾಜ್ಯದ ಎಲ್ಲ ನಾಯಕರಿಗೂ ಧನ್ಯವಾದ ಸಲ್ಲಿಸುವೆ ಎಂದು ತಿಳಿಸಿದ್ದಾರೆ.
ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವ ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ರಾಜ್ಯ ಸರ್ಕಾರದ ಮೇಲೆ ತೀವ್ರ ಒತ್ತಡ ಹಾಕಿತ್ತು. ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿತ್ತು.