ಬಂಟ್ವಾಳ : ಬಂಟ್ವಾಳದ ಸಿದ್ಧಕಟ್ಟೆ ಸಮೀಪ ಸೊರ್ನಾಡು ಎಂಬಲ್ಲಿ ಇಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲೊರೆಟ್ಟೊಪದವು ನಿವಾಸಿ ನಿತೇಶ್ (30), ಮಯ್ಯರಬೈಲು ನಿವಾಸಿ ಶಶಿಧರ್ (26) ಮೃತರು. ಇವರಿಬ್ಬರೂ ಸಿದ್ದಕಟ್ಟೆಯಿಂದ ಬಿ.ಸಿ ರೋಡ್ ಕಡೆಗೆ ಬರುತ್ತಿದ್ದರು. ಈ ಸಂದರ್ಭ ಬಿ.ಸಿ ರೋಡಿನಿಂದ ಕಾರ್ಕಳಕ್ಕೆ ತೆರಳುತ್ತಿದ್ದ ಟಿಪ್ಪರ್ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯಾದ ಬಳಿಕ ಲಾರಿ ಚಾಲಕ ನಿಲ್ಲಿಸದೆ ತೆರಳಿದ್ದು, ಸ್ಥಳೀಯರು ಬೆನ್ನಟ್ಟಿ ಕುದ್ಕೋಳಿ ಎಂಬಲ್ಲಿ ತಡೆಗಟ್ಟಿದ್ದಾರೆ. ಬಳಿಕ ಮೆಲ್ಕಾರ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಬಂದು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕ ಬಿಸಿ ರೋಡಿನಿಂದ ಕಾರ್ಕಳದತ್ತ ವೇಗವಾಗಿ ತೆರಳುತ್ತಿದ್ದಾಗ ಸೋರ್ನಾಡು ಹೆದ್ದಾರಿ ತಿರುವಿನಲ್ಲಿ ಬೈಕಿಗೆ ಡಿಕ್ಕಿಯಾಗಿದೆ. ಮೃತ ಯುವಕರ ಪೈಕಿ ನಿತಿನ್ ಬೈಕ್ ಮೆಕ್ಯಾನಿಕ್ ಆಗಿದ್ದು, ಶಶಿರಾಜ್ ಪಿಕಪ್ ವಾಹನದಲ್ಲಿ ಚಾಲಕನಾಗಿ ದುಡಿಯುತ್ತಿದ್ದ. ಇಬ್ಬರು ಕೂಡ ಬೈಕಿನಲ್ಲಿ ಕಾರ್ಯ ನಿಮಿತ್ತ ತೆರಳುತ್ತಿದ್ದಾಗ ಜವರಾಯ ಲಾರಿಯ ಮೂಲಕ ಎದುರಾಗಿದ್ದಾನೆ.