ಉಳ್ಳಾಲ: ‘ಕಾಸರಗೋಡಿನ ನೆಲ್ಲಿಕುನ್ನುವಿನಲ್ಲಿ ಕಡಲ್ಕೊರೆತ ತಡೆಗೆ ಬಳಸಿದ ಅಳವಡಿಸಿರುವ ತಂತ್ರಜ್ಞಾನವನ್ನು ಅಧ್ಯಯನ ಮಾಡಿಕೊಂಡು ಬಂದಿದ್ದೇನೆ. ಸೋಮೇಶ್ವರ ಉಚ್ಚಿಲ ಭಾಗದಲ್ಲಿ ಹೆಚ್ಚಾಗುತ್ತಿರುವ ಕಡಲ್ಕೊರೆತವನ್ನು ನಿಲ್ಲಿಸುವ ಸಲುವಾಗಿ ಇದೇ ತಂತ್ರಜ್ಞಾನ ಬಳಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶೀಘ್ರದಲ್ಲಿಯೇ ವರದಿ ಸಲ್ಲಿಸಲಿದ್ದೇನೆ’ ಎಂದು ಬಂದರು ಸಚಿವ ಎಸ್.ಅಂಗಾರ ತಿಳಿಸಿದರು.
ಸೋಮೇಶ್ವರ ಉಚ್ಚಿಲದ ಕಡಲ್ಕೊರೆತ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಮಸ್ಯೆ ನಿವಾರಿಸಲು ಈ ಹಿಂದಿನ ಎಲ್ಲ ತಂತ್ರಜ್ಞಾನಗಳ ಬದಲು ಕಾಸರಗೋಡು ನೆಲ್ಲಿಕುನ್ನು ಲೈಟ್ಹೌಸ್ ಬಳಿಯಲ್ಲಿ ಅಳವಡಿಸಲಾದ ತಂತ್ರಜ್ಞಾನ ಸೂಕ್ತ. ಈಗಾಗಲೇ ಆ ತಂತ್ರಜ್ಞಾನವನ್ನು ಕಂಡ ಬಳಿಕ ನಮಗಂತೂ ವಿಶ್ವಾಸ ಮೂಡಿದೆ’ ಎಂದರು. ‘12ರಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾಗ ಕರಾವಳಿ ಭಾಗದ ಈ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದ್ದೆ. ಈ ಸಮಸ್ಯೆ ನೀಗಿಸಲು ಶಾಶ್ವತವಾದ ತಡೆಗೋಡೆ ರಚಿಸುವುದಕ್ಕೆ ಸರ್ಕಾರವೂ ಮುತುವರ್ಜಿ ವಹಿಸಿದೆ. ಈ ಕಾರ್ಯವನ್ನು ಶೀಘ್ರವೇ ಆರಂಭಿಸಲಿದ್ದೇವೆ. ಬಂದರು ಇಲಾಖೆಯ ನಿರ್ದೇಶಕ ಸ್ವಾಮಿ ಹಾಗೂ ಮುಖ್ಯ ಎಂಜಿನಿಯರ್ ರಾಥೋಡ್ ಈಗಾಗಲೇ ಸ್ಥಳಪರಿಶೀಲನೆ ಮಾಡಿದ್ದು, ಮುಂದಿನ ಮೂರು ದಿನಗಳೊಳಗೆ ಎಲ್ಲ ವಿವರಗಳನ್ನು ಮುಖ್ಯಮಂತ್ರಿಗೆ ಸಲ್ಲಿಸಲಿದ್ದೇವೆ’ ಎಂದರು.
‘ಅನೇಕ ವರ್ಷಗಳಿಂದ ತೊಂದರೆಗಳನ್ನು ಅನುಭವಿಸಿದ ಕಾರಣ ಜನರಲ್ಲೂ ಈ ಬಗ್ಗೆ ಕಾತರ ಇದೆ. ಕಡಲ್ಕೊರೆತದ ಹೆಸರು ಹೇಳಿದ ತಕ್ಷಣ ಭಯಭೀತರಾಗುತ್ತಿದ್ದಾರೆ. ಅನೇಕ ಸರ್ಕಾರಗಳು ಇಲ್ಲಿ ತಾತ್ಕಾಲಿಕ ರಕ್ಷಣಾ ಕೆಲಸ ಮಾಡಿದ್ದರೂ ಅದರಿಂದ ಯಾವುದು ಪ್ರಯೋಜನ ಆಗಿಲ್ಲ. ಹಾಗಾಗಿ ಸಹಜವಾಗಿ ಇಲ್ಲಿನ ಮೀನುಗಾರರಲ್ಲಿ ಆತಂಕ ಕಾಡಲು ಶುರುವಾಗಿದೆ. ಆ ನಿಟ್ಟಿನಲ್ಲಿ ಇಲ್ಲಿ ಒಂದು ಶಾಶ್ವತವಾದ ಕಾರ್ಯ ನಡೆಯಬೇಕು.
ಆ ದೃಷ್ಟಿಯಲ್ಲಿ ಇಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮುಂದುವರಿಯಲೇ ಬೇಕಿದೆ’ ಎಂದರು.