ಮಂಗಳೂರು: ದ.ಕ ಜಿಲ್ಲೆಯಲ್ಲಿ ನಿಫಾ ವೈರಸ್ ಕುರಿತಂತೆ ಯಾವುದೇ ಪ್ರಕರಣಗಳು ಇಲ್ಲಿವರೆಗೆ ಕಂಡು ಬಂದಿಲ್ಲ. ಶನಿವಾರ ವೆನ್ಲಾಕ್‌ಗೆ ದಾಖಲಾಗಿರುವ ಕಾರವಾರ ಮೂಲದ 25 ವರ್ಷ ಪ್ರಾಯದ ಯುವಕ ಸೋಂಕಿನ ಲಕ್ಷಣಗಳಿಲ್ಲ. ಸದ್ಯ ಆತನ ಜ್ವರ ಮತ್ತು ತಲೆ ನೋವು ಕೂಡಾ ಕಡಿಮೆಯಾಗಿದೆ. ಗೂಗಲ್‌ನಲ್ಲಿ ನಿಫಾ ಲಕ್ಷಣಗಳನ್ನು ಸರ್ಚ್ ಮಾಡಿ ತನಗೂ ಬಂದಿರಬಹುದು ಎನ್ನುವ ಆತಂಕ ಮತ್ತು ಗಾಬರಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಜನರು ಗಾಬರಿಯಾಗುವ ಅವಶ್ಯಕತೆಯಿಲ್ಲ ಎಂದು ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಯುವಕ ಮತ್ತು ಆತನದ ತಂದೆ ಇಬ್ಬರನ್ನೂ ಐಸೋಲೇಶನ್‌ನಲ್ಲಿ ಇಡಲಾಗಿದ್ದು, ಊರಿನಲ್ಲಿ ಆತನ ತಾಯಿ ಮತ್ತು ತಂಗಿಯನ್ನು ಐಸೋಲೇಶನ್‌ನಲ್ಲಿ ಇಡುವಂತೆ ಉ.ಕ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ.
ಎಲ್ಲರ ರಕ್ತ, ಮೂತ್ರ ಹಾಗೂ ಮೂಗಿನ ಸ್ವಾಬ್‌ನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಎರಡು ದಿನದಲ್ಲಿ ಟೆಸ್ಟ್ ರಿಪೋರ್ಟ್ ಲಭ್ಯವಾಗಲಿದೆ. ಸದ್ಯ ಆತನನ್ನು ಶಂಕಿತ ಎಂದೂ ಹೇಳಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಕೇರಳದಲ್ಲಿ ನಿಫಾ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ತಪಾಸಣೆ ಮತ್ತಷ್ಟು ಬಿಗುಗೊಳಿಸಲಾಗಿದ್ದು, ವ್ಯವಸ್ಥಿತವಾಗಿ ಚೆಕ್ ಮಾಡಲು ಸೂಚಿಸಲಾಗಿದೆ. ಮತ್ತಷ್ಟು ಥರ್ಮಲ್ ಸ್ಕ್ಯಾನರ್‌ಗಳನ್ನು ಒದಗಿಸಲಾಗಿದೆ. ವಾರಾಂತ್ಯ ಕರ್ಫ್ಯೂ ತೆರವುಗೊಳಿಸಿದರೂ, ಗಡಿ ವಿಚಾರವಾಗಿ ಸಡಿಲ ಮಾಡುವ ಪ್ರಸ್ತಾವನೆ ಸದ್ಯಕ್ಕೆ ಇಲ್ಲ ಎಂದರು.
17ರಂದು ಮೆಗಾ ಲಸಿಕಾ ಶಿಬಿರ:
ಸೆ.17ರಂದು ಜಿಲ್ಲೆಯಲ್ಲಿ ಮೆಗಾ ಲಸಿಕಾ ಮೇಳ ಆಯೋಜಿಸಲಾಗಿದೆ. ಸುಮಾರು 1.5 ಲಕ್ಷ ಮಂದಿಗೆ ಅಂದು ವ್ಯಾಕ್ಸಿನ್ ನೀಡುವ ಗುರಿ ಹೊಂದಲಾಗಿದ್ದು, ಜಿಲ್ಲೆಯಲ್ಲಿ 500 ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು. ಗ್ರಾಪಂ ವ್ಯಾಪ್ತಿಯಲ್ಲಿ ಬಾಕಿ ಇರುವವರು, ಎರಡನೇ ಲಸಿಕೆಗೆ ಅರ್ಹರಿರುವವರನ್ನು ಗುರುತಿಸಿ ಲಸಿಕೆ ನೀಡಲಾಗುವುದು ಎಂದು ಡಿಸಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಸಿಇಒ ಡಾ.ಕುಮಾರ, ಡಿಎಚ್‌ಒ ಡಾ.ಕಿಶೋರ್ ಕುಮಾರ್, ವೆನ್ಲಾಕ್ ಡಿಎಂಒ ಡಾ. ಸದಾಶಿವ ಶ್ಯಾನುಭೋಗ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post