ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಅವರು ಮೊದಲನೇ ಆರೋಪಿಯಾಗಿದ್ದಾರೆ.
ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾದ ಈಶ್ವರಪ್ಪ ರಾಜೀನಾಮೆ ಪತ್ರ ಸಲ್ಲಿಸಿದರು. ಮುಖ್ಯಮಂತ್ರಿ ನಿವಾಸದ ಬಳಿ ಸೇರಿದ್ದ ಈಶ್ವರಪ್ಪ ಅವರ ಅಭಿಮಾನಿಗಳು, ಈಶ್ವರಪ್ಪ ಅವರಿಗೆ ‘ಜಿಂದಾಬಾದ್’ ಕೂಗಿದರು.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ವರಿಷ್ಠರು ನೀಡಿದ್ದ ಸೂಚನೆಯನ್ನು ಕಡೆಗಣಿಸಿ ಶಿವಮೊಗ್ಗದಲ್ಲಿ ಉಳಿದುಕೊಂಡಿದ್ದ ಈಶ್ವರಪ್ಪ, ಪ್ರಾಥಮಿಕ ತನಿಖೆಯ ವರದಿ ಬರುವವರೆಗೂ ಮುಂದುವರಿಯುವುದಾಗಿ ಪಟ್ಟು ಹಿಡಿದಿದ್ದರು. ಕಾಂಗ್ರೆಸ್ ಮುಖಂಡರು ವಿಧಾನಸೌಧದ ಮುಂದೆ ಅಹೋರಾತ್ರಿ ಧರಣಿ ಆರಂಭಿಸುತ್ತಿದ್ದಂತೆಯೇ ಪುನಃ ಮಧ್ಯಪ್ರವೇಶ ಮಾಡಿದ ಬಿಜೆಪಿ ವರಿಷ್ಠರು, ತಕ್ಷಣ ರಾಜೀನಾಮೆ ಕೊಡುವಂತೆ ಸಂದೇಶ ರವಾನಿಸಿದರು. ಅದರ ಬೆನ್ನಲ್ಲೇ ಗುರುವಾರ ಸಂಜೆ ಶಿವಮೊಗ್ಗದಲ್ಲಿ ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ ನಿರ್ಧಾರ ಪ್ರಕಟಿಸಿದ್ದರು.
‘ಬಾಕಿ ಬಿಲ್ ಪಾವತಿಗೆ ಶೇಕಡ 40ರಷ್ಟು ಲಂಚಕ್ಕೆ ಈಶ್ವರಪ್ಪ ಬೇಡಿಕೆ ಇಟ್ಟಿದ್ದಾರೆ’ ಎಂದು ಆರೋಪಿಸಿದ್ದ ಸಂತೋಷ್ ಉಡುಪಿಯ ಲಾಡ್ಜ್ ಒಂದರಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿರುವುದು ಮಂಗಳವಾರ ಬಹಿರಂಗವಾಗಿತ್ತು. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳಾದ ಕಾಂಗ್ರೆಸ್, ಎಎಪಿ ಪ್ರತಿಭಟನೆ ಆರಂಭಿಸಿದ್ದವು.
ಸೋಮವಾರ ಅಂಗೀಕಾರ: ‘ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯಪಾಲರಿಗೆ ಸಲ್ಲಿಕೆ ಮಾಡಲಿದ್ದು, ಗುಜರಾತ್ ಪ್ರವಾಸಕ್ಕೆ ತೆರಳಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸೋಮವಾರ ರಾಜ್ಯಕ್ಕೆ ಹಿಂದಿರುಗಲಿದ್ದು, ಅಂದೇ ಈಶ್ವರಪ್ಪ ರಾಜೀನಾಮೆ ಅಂಗೀಕಾರ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post