ಮಂಗಳೂರು, ಎ.16: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಿದರಷ್ಟೇ ಸಾಲದು. ಅವರನ್ನು ಕೂಡಲೇ ಬಂಧಿಸಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿದೆ.
ಹಿಂದು ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಸುದ್ದಿಗೋಷ್ಠಿ ನಡೆಸಿ, ಈ ಹಿಂದೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿಯೂ ಕಾಂಗ್ರೆಸಿಗರು ಆರೋಪಿ ಸ್ಥಾನದಲ್ಲಿದ್ದ ಕೆ.ಎಸ್. ಜಾರ್ಜ್ ಗೆ ಕ್ಲೀನ್ ಚಿಟ್ ನೀಡಿದ್ದಾರೆ. ಇವರಿಗೆ ಕ್ಲೀನ್ ಚಿಟ್ ನೀಡುವುದಷ್ಟೇ ಅಜೆಂಡಾ. ಯಾವುದೇ ವ್ಯಕ್ತಿ ಮರಣ ಕಾಲದಲ್ಲಿ ತನಗೆ ಕಿರುಕುಳ ನೀಡಿದವರ ಹೆಸರು ಹೇಳಿದರೆ, ಆ ಬಗ್ಗೆ ಪತ್ರ ಬರೆದಿಟ್ಟು ಸತ್ತರೆ ಅದು ಮರಣ ಪತ್ರವೇ ಆಗುತ್ತದೆ. ವಾಟ್ಸಪ್ ನಲ್ಲಿ ಪತ್ರ ಬರೆದರೂ, ಅದನ್ನು ಡೆತ್ ನೋಟ್ ಎಂದು ಪರಿಗಣಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಹೊರಗೆ ಬಿಟ್ಟುಕೊಂಡು ತನಿಖೆ ನಡೆಸುವುದಂದ್ರೆ ಅದು ನಾಟಕ ಅಷ್ಟೇ. ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು ಎಂದು ಆಗ್ರಹ ಮಾಡಿದ್ದಾರೆ.
ಲಂಚ, ಮಂಚ ಮತ್ತು ಹಿಂದೂ ವಿರೋಧಿ ನೀತಿಗಳು ಮಾತ್ರ ಬಿಜೆಪಿ ಅಜೆಂಡಾ ಆಗಿದೆ. ಯಾವ ಉದ್ದೇಶಕ್ಕಾಗಿ ಅಧಿಕಾರಕ್ಕಾಗಿ ಬಂದಿದ್ದಾರೋ ಅದು ಸಾಕಾರ ಆಗುತ್ತಿಲ್ಲ. ಈಶ್ವರಪ್ಪರ ರಾಜೀನಾಮೆ ಒತ್ತಾಯದ ಮೇಲೆ ಆಗಿದ್ದು, ಇದು ಚುನಾವಣೆ ಹಿನ್ನೆಲೆಯಲ್ಲಿ ಬೂಟಾಟಿಕೆಯ ಕುತಂತ್ರ ಮಾತ್ರ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಪ್ರಮೋದ್ ಉಚ್ಚಿಲ್, ಹರ್ಷ ನಾಯಕ್, ಶಿವಪ್ರಸಾದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.