ಉಡುಪಿ, ಎ.16: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಏಳು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಉಡುಪಿ ಎಸ್ಪಿ ಕಚೇರಿಯಲ್ಲಿಂದು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ನಿರ್ದೇಶನ ನೀಡಲು ತಾನು ಉಡುಪಿಗೆ ಬಂದಿದ್ದು, ಎಸ್ಪಿ ನೇತೃತ್ವದಲ್ಲಿ ರಚಿಸಲಾದ ಈ ತಂಡಗಳು ರಾಜ್ಯದ ವಿವಿಧ ಭಾಗಗಳಿಗೆ ತೆರಳಿ ಸಮಗ್ರ ತನಿಖೆ ನಡೆಸಲಿದೆ. ತನಿಖಾ ತಂಡಗಳ ಮೇಲುಸ್ತುವಾರಿಯನ್ನು ನಾನು ವಹಿಸಿಕೊಂಡಿದ್ದೇನೆ ಎಂದರು
ಹಂತಹಂತವಾಗಿ ಪರಿಶೀಲನೆ ನಡೆಸಿ ಮಾಹಿತಿಗಳನ್ನು ನೀಡುತ್ತೇವೆ. ಸಮರ್ಪಕವಾಗಿ ಮತ್ತು ಸಮಗ್ರವಾಗಿ ತನಿಖೆಯನ್ನು ಮಾಡಲಾಗುವುದು. ಎಫ್‌ಎಸ್‌ಎಲ್, ಫೋರೆನ್ಸಿಕ್ ಸಾಯನ್ಸ್ ಲ್ಯಾಬರೋಟರಿ ವರದಿ ಬರಬೇಕು. ಡಾಕ್ಟರ್ಸ್ ರಿಪೋರ್ಟ್ ಗಳು ಇನ್ನು ಬರಬೇಕಾಗಿದ್ದು, ಎಲ್ಲಾ ಹಂತದ ವರದಿಗಳನ್ನು ಪರಿಶೀಲನೆ ಮಾಡಬೇಕು. ಮರಣೋತ್ತರ ವರದಿ ಬಗ್ಗೆ ಈ ಹಂತದಲ್ಲಿ ಯಾವುದನ್ನು ಹೇಳಲು ಸಾಧ್ಯವಿಲ್ಲ ಎಂದರು.
ಎಫ್‌ಎಸ್‌ಎಲ್ ಒಂದು ಒಂದು ಸ್ವತಂತ್ರವಾದ ಸಂಸ್ಥೆ. ಅವರು ಅವರ ವರದಿಗಳನ್ನು ಕೊಡುತ್ತಾರೆ. ಎಫ್‌ಎಸ್‌ಎಲ್ ವರದಿ ಶೀಘ್ರ ಕೊಡುವಂತೆ ಪೊಲೀಸ್ ಇಲಾಖೆಯಿಂದ ಒತ್ತಾಯಿಸಿದ್ದೇವೆ ಎಂದಿದಾರೆ.
ಇನ್ನು ಎಡಿಜಿಪಿ ಆಗಿ ನಾನು ತನಿಖಾ ಅಧಿಕಾರಿಗಳನ್ನು ಮತ್ತು ತಂಡಗಳನ್ನು ಮೇಲುಸ್ತುವಾರಿ ಮಾಡುತ್ತೇನೆ. ನನ್ನ ನಿರ್ದೇಶನದಂತೆ ತನಿಖಾ ತಂಡಗಳು ಕೆಲಸ ಮಾಡುತ್ತವೆ. ಪ್ರಕರಣವನ್ನು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು. ಪ್ರತಿಯೊಂದು ಆಯಾಮಗಳನ್ನು ಕೂಡ ನಾವು ಪರಿಶೀಲನೆ ಮಾಡಬೇಕಾಗುತ್ತದೆ. ಸಮರ್ಪಕವಾಗಿ ತನಿಖೆ ಮಾಡುತ್ತೇವೆ ಎಂದು ಆಶ್ವಾಸನೆ ಕೊಡುತ್ತೇನೆ ಎಂದು ಹೇಳಿದ್ದಾರೆ.