ಮಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೆ.ಎಸ್. ಈಶ್ವರಪ್ಪ ಕೊನೆಗೂ ತಪ್ಪನ್ನು ಒಪ್ಪಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಅವರನ್ನು ಬಂಧಿಸಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಒತ್ತಾಯಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಯಾವ ರೀತಿಯಲ್ಲಿ ಆಡಳಿತ ನಡೆಸುತ್ತಿದೆ ಎಂಬುದನ್ನು ದೇಶ, ರಾಜ್ಯದ ಜನರು ಕಂಡಿದ್ದಾರೆ. ಪ್ರಧಾನಿ ಮೋದಿ ಅವರು ಸಿದ್ದರಾಮಯ್ಯ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದ್ದರು. ಆದರೆ ತಮ್ಮದೇ ಪಕ್ಷದ ಸರ್ಕಾರದ ಸಚಿವರ ವಿರುದ್ಧ ಗುತ್ತಿಗೆದಾರ ಸಂಘದ ಅಧ್ಯಕ್ಷರೇ ಒಂದು ವರ್ಷದ ಹಿಂದೆ 40 ಪರ್ಸೆಂಟ್ ಲಂಚದ ಆರೋಪ ಮಾಡಿದ್ದರೂ ಪ್ರಧಾನಿ ಮೌನ ವಹಿಸಿದ್ದರು. ಇದರ ಪರಿಣಾಮವಾಗಿ ಗುತ್ತಿಗೆದಾರ ಸಂತೋಷ್ ಪಾಟೀಲ ಪ್ರಾಣಕಳೆದುಕೊಳ್ಳುವ ಪರಿಸ್ಥಿತಿ ಬಂತು ಎಂದು ಆರೋಪಿಸಿದರು.
ಭ್ರಷ್ಟಾಚಾರ, ಲಂಚ ಆರೋಪದ ಬಗ್ಗೆ ವಿಧಾನಸಭೆ, ವಿಧಾನ ಪರಿಷತ್‍ನಲ್ಲಿ ಚರ್ಚಿಸಲು ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ಸಿಗಲಿಲ್ಲ. ಹೀಗಾಗಿ, ಬೀದಿಗಿಳಿದು ಕಾಂಗ್ರೆಸ್ ಪ್ರತಿಭಟಿಸುತ್ತಿದೆ. ತಪ್ಪು ಮಾಡಿದ್ದು ಒಪ್ಪಿಕೊಂಡು ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದಾರೆ. ಈ ಕುರಿತು ಸರ್ಕಾರದ ವಿರುದ್ಧವೇ ತನಿಖೆ ನಡೆಸುವಂತೆ ಕೋರಿ ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ ಸಲ್ಲಿಸಿದೆ. ಪ್ರಕರಣದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಮೃತ ಗುತ್ತಿಗೆದಾರರ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ಒದಗಿಸಬೇಕು ಎಂದು ಡಾ. ಪರಮೇಶ್ವರ್ ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಈಶ್ವರಪ್ಪ ಅವರ ಪ್ರತಿಕೃತಿಯನ್ನು ದಹಿಸಲಾಯಿತು. ಕಾರ್ಯಕರ್ತರೊಬ್ಬರು ಈಶ್ವರಪ್ಪ ಮುಖವಾಡ ಹಾಕಿ ಅಣುಕು ಪ್ರದರ್ಶನ ನೀಡಿದರು. ಮಿನಿ ವಿಧಾನ ಸೌಧದ ಎದುರು ಕಾರ್ಯಕರ್ತರು ಕೆಲ ನಿಮಿಷಗಳ ಕಾಲ ರಸ್ತೆ ತಡೆ ಮಾಡಿ ಬಿಜೆಪಿ ಸರ್ಕಾರ ಹಾಗೂ ಈಶ್ವರಪ್ಪ ವಿರುದ್ಧ ಧಿಕ್ಕಾರ ಕೂಗಿದರು.
ಮುಖಂಡರಾದ ಮಂಜುನಾಥ ಭಂಡಾರಿ, ಶಕುಂತಳಾ ಶೆಟ್ಟಿ, ಮಿಥುನ್ ರೈ, ಲುಕ್ಮಾನ್ ಬಂಟ್ವಾಳ, ಪಿ.ವಿ. ಮೋಹನ್, ಶಾಲೆಟ್ ಪಿಂಟೊ, ಅಪ್ಪಿ, ಶಾಹುಲ್ ಹಮೀದ್, ಟಿ.ಕೆ. ಸುಧೀರ್, ನಝೀರ್ ಬಜಾಲ್, ಮುಹಮ್ಮದ್ ಮೋನು, ವಿಶ್ವಾಸ್ ಕುಮಾರ್ ದಾಸ್ ಇದ್ದರು.