ಮಂಗಳೂರು: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 11ಕ್ಕೆ ಏರಿದೆ. ಕಳವಾರು ಆಶ್ರಯ ಕಾಲೊನಿಯ ಅಬೂಬಕರ್ ಪುತ್ರ ಅಜರುದ್ದೀನ್ ಅಲಿಯಾಸ್ ಅಜರ್ ಯಾನೆ ಅಜ್ಜು(29), ಉಡುಪಿ ಕಾಪು ಮೂಲದ, ಬಜ್ಪೆ ಭಟ್ರಕರೆ ಉಸ್ಮಾನೀಯಾ ಮಸೀದಿ ಬಳಿಯ ನಿವಾಸಿ ಕೆಎಂ ನಜೀರ್ ಎಂಬವರ ಪುತ್ರ ಅಬ್ದುಲ್ ಖಾದರ್ ಯಾನೆ ನೌಫಲ್(24) ಹಾಗೂ ಬಂಟ್ವಾಳ ಫರಂಗಿಪೇಟೆ ಮೂಲದ ಹಾಸನ ಕೆ.ಆರ್.ಪುರಂನಲ್ಲಿ ವಾಸವಿದ್ದ ದಿ|ನಸ್ರುದ್ದೀನ್ ಎಂಬವರ ಪುತ್ರ ನೌಷದ್ ಯಾನೆ ವಾಮಂಜೂರು ನೌಷದ್ ಯಾನೆ ಚೊಟ್ಟೆ ನೌಷದ್(39) ಬಂಧಿತರು.
ಆರೋಪಿಗಳ ಪೈಕಿ ಅಜರುದ್ದೀನ್ ವಿರುದ್ಧ ಈ ಹಿಂದೆ ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸ್ ರಾಣೆಗಳಲ್ಲಿ 3 ಕಳವು ಪ್ರಕರಣ ದಾಖಲಾಗಿರುತ್ತದೆ. ಈತನು ಪ್ರಕರಣದ ಆರೋಪಿಗಳಿಗೆ ಕೊಲೆಯಾದ ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಮಾಹಿತಿಯನ್ನು ನೀಡಿ ಕೊಲೆಗೆ ಸಹಕರಿಸಿರುತ್ತಾನೆ. ಆರೋಪಿ ಅಬ್ದುಲ್ ಖಾದರ್ ಆರೋಪಿಗಳು ಕೊಲೆ ಕೃತ್ಯ ನಡೆಸಿದ ನಂತರ ಕಾರಿನಲ್ಲಿ ಪರಾರಿಯಾಗುವ ಸಮಯದಲ್ಲಿ ಅವರಿಗೆ ಸಹಕಾರವಿತ್ತಿದ್ದ.
ಇನ್ನೋರ್ವ ಆರೋಪಿ ನೌಷದ್ ಸುಹಾಸ್ ಶೆಟ್ಟಿಯ ಕೊಲೆಗೆ ಉಳಿದ ಆರೋಪಿಗಳ ಜೊತೆ ಸಂಚು ರೂಪಿಸಿದ್ದಲ್ಲದೆ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತನು ಈ ಹಿಂದೆ ಸುರತ್ಕಲ್, ಬಜಪೆ, ಮೂಡುಬಿದಿರೆ, ಮಂಗಳೂರು ಉತ್ತರ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆಗೆ ಸಂಚು ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿರುತ್ತದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಜರುದ್ದೀನ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಬ್ದುಲ್ ಖಾದರ್ ಹಾಗೂ ನೌಷದ್‌ರನ್ನು ಹೆಚ್ಚಿನ ತನಿಖೆಗಾಗಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post